ಬೆಂಗಳೂರು : ಕೆಲಸ ಕೊಟ್ಟ ಕಂಪನಿಯಲ್ಲೇ ಲ್ಯಾಪ್ ಟಾಪ್ ಕದ್ದು ಬೆಟ್ಟಿಂಗ್ ಆಡುತ್ತಿದ್ದ ಮಾಜಿ ನೌಕರನೋರ್ವ ಪೊಲೀಸರ ಅತಿಥಿಯಾಗಿದ್ದಾನೆ.
ಬಂಧಿತನನ್ನು ಮಂಗಳೂರು ಮೂಲದ ಸುಬ್ರಹ್ಮಣ್ಯ ಪ್ರಸಾದ್ (34) ಎಂದು ಗುರುತಿಸಲಾಗಿದೆ. ಆರೋಪಿಯಿಂದ ಸುಮಾರು 19 ಲಕ್ಷ ಮೌಲ್ಯದ ಲ್ಯಾಪ್ ಟಾಪ್ , 5 ಐಫೋನ್ ಜಪ್ತಿ ಮಾಡಲಾಗಿದೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಖಾಸಗಿ ಕಂಪನಿಯಲ್ಲಿ ಈತ 3 ವರ್ಷಗಳಿಂದ ಸ್ಟೋರ್ ಇನ್ ಚಾರ್ಜ್ ಆಗಿ ಕೆಲಸ ಮಾಡುತ್ತಿದ್ದನು. ನಂತರ ಕೆಲಸ ಬಿಟ್ಟು ಹೋಗಿದ್ದನು. ನಂತರ ಸ್ಟೋರ್ ನಲ್ಲಿ ಪರಿಶೀಲನೆ ನಡೆಸಿದಾಗ 56 ಲ್ಯಾಪ್ ಟಾಪ್ ಹಾಗೂ 16 ಐಫೋನ್ ಕಳವು ಆಗಿರುವುದು ಬೆಳಕಿಗೆ ಬಂದಿತ್ತು. ನಂತರ ಪೊಲೀಸರಿಗೆ ದೂರು ನೀಡಿದಾಗ ಆರೋಪಿ ತಗ್ಲಾಕೊಂಡಿದ್ದಾನೆ.
ಆರೋಪಿ ಬೆಟ್ಟಿಂಗ್ ವ್ಯಸನಿಯಾಗಿದ್ದನು. ದಿನೇ ದಿನೇ ಬೆಟ್ಟಿಂಗ್ ಹೆಚ್ಚಾಗುತ್ತಿದ್ದಂತೆ ಅಕ್ರಮವಾಗಿ ಹಣ ಸಂಪಾದನೆಗೆ ಮುಂದಾಗಿದ್ದನು. ಕಂಪನಿ ಸೂಚಿಸಿದ್ದಕ್ಕಿಂತ ಹೆಚ್ಚು ಲ್ಯಾಪ್ ಟಾಪ್ ಆರ್ಡರ್ ಮಾಡುತ್ತಿದ್ದನು. ಆ ಲ್ಯಾಪ್ ಟಾಪ್ ಗಳನ್ನು ಕದ್ದು ಕಡಿಮೆ ಬೆಲೆಗೆ ಮಾರಾಟ ಮಾಡಿ ಬಂದ ಹಣದಿಂದ ಬೆಟ್ಟಿಂಗ್ ಆಡುತ್ತಿದ್ದನು ಎನ್ನಲಾಗಿದೆ.