ಬೆಳಗಾವಿ: ಪಶ್ಚಿಮ ಘಟ್ಟ, ಮಹಾರಾಷ್ಟ್ರ, ಬೆಳಗಾವಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯಲ್ಲಿ ಸಪ್ತ ನದಿಗಳು ಉಕ್ಕಿ ಹರಿಯುತ್ತಿರುವ ಪರಿಣಾಮ ಹಲವು ಗ್ರಾಮಗಳು ಜಲಾವೃತಗೊಂಡಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಪ್ರವಾಹ ಭೀತಿ ಎದುರಾಗಿದೆ. ಈವರೆಗೆ 18 ಸೇತುವೆಗಳು ಮುಳುಗಡೆಯಾಗಿವೆ. ಇಂದು ಒಂದೇ 8 ಸೇತುವೆಗಳು ಜಲಾವೃತಗೊಂಡಿವೆ. ಕೃಷ್ಣಾ, ವೇದಗಂಗಾ, ದೂದ ಗಂಗಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಸೇತುವೆಗಳು ಸಂಪೂರ್ನ ಮುಳುಗಡೆಯಾಗಿವೆ.
ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದ್ದು, ಜನರು ಪರದಾಡುವ ಸ್ಥಿತಿ ನಿರ್ಮಾಣವಗಿದೆ. ತುಂಬಿ ಹರಿಯುತ್ತಿರುವ ಕೆಲ ಸೇತುವೆಗಳ ಮೇಲೆಯೇ ಜನರು ಪ್ರಾಣದ ಹಂಗು ತೊರೆದು ಓಡಾಡುವ ಅನಿವಾರ್ಯ ಎದುರಾಗಿದೆ. ಕೆಲವೆಡೆ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ಸಂಚಾರ ಬಂದ್ ಮಾಡಿದ್ದಾರೆ. ಜಿಲ್ಲೆಯಲ್ಲಿ ಕ್ಷಣ ಕ್ಷಣಕ್ಕೂ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು, ಪ್ರವಾಹ ಭೀತಿಯಲ್ಲಿ ಜನರು ಕಾಲ ಕಳೆಯುವಂತಾಗಿದೆ.