ಬೆಂಗಳೂರು : ಬೆಂಗಳೂರಿನಲ್ಲಿ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಅಕ್ಷಯ್ (29) ಬ್ರೈನ್ ಡೆಡ್ ಆಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಶಸ್ತ್ರಚಿಕಿತ್ಸೆ ನಡೆದು 60 ತಾಸು ಕಳೆದ ಬಳಿಕವೂ ಮೆದುಳು ಸ್ಪಂದಿಸದೇ ಇರುವುದರಿಂದ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಪರಿಗಣಿಸಿರುವುದಾಗಿ ವೈದ್ಯರು ಹೇಳಿದ್ದಾರೆ.
ಬನಶಂಕರಿ 2ನೇ ಹಂತದ ಶ್ರೀನಿವಾಸನಗರದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಏಕಾಏಕಿ ಮರದ ಕೊಂಬೆ ಮುರಿದು ಬಿದ್ದಿದ್ದು, ಬೈಕ್ ಸವಾರ ಅಕ್ಷಯ್ (29) ಗಂಭೀರವಾಗಿ ಗಾಯಗೊಂಡಿದ್ದನು.
ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅಕ್ಷಯ್ ಭಾನುವಾರ ತಂದೆ ಹುಟ್ಟುಹಬ್ಬದ ಹಿನ್ನೆಲೆ ಮಟನ್ ತೆಗೆದುಕೊಂಡು ಬರುವುದಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಗಂಭೀರ ಗಾಯಗಳಾಗಿದ್ದ ಅಕ್ಷಯ್ ಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ತಲೆಚಿಪ್ಪು 17 ಚೂರುಗಳಾಗಿದೆ ಎಂದು ವೈದ್ಯರು ಹೇಳಿದ್ದರು.
ಮರದ ಕೊಂಬೆ ಬಿದ್ದ ಹೊಡೆತಕ್ಕೆ ಬೈಕ್ ಸವಾರ ಬೈಕ್ ನಿಂದ ಕೆಳಗೆ ಬಿದ್ದಿದ್ದರು. ರಕ್ತದ ಮಡುವಲ್ಲಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಬೈಕ್ ಸವಾರನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.