ರೈತರಿಗೆ ಗುಡ್ ನ್ಯೂಸ್: ಕೃಷಿ ಪಂಪ್ಸೆಟ್ ಗಳ ಸಕ್ರಮಕ್ಕೆ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿ

ಬೆಂಗಳೂರು: ಅಕ್ರಮ ಕೃಷಿ ಪಂಪ್ಸೆಟ್ ಗಳನ್ನು ಸಕ್ರಮಗೊಳಿಸಲು ರಾಜ್ಯ ಸರ್ಕಾರ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿಗೆ ತಂದಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ರಾಮನಗರ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿ, ರೈತರು ಸ್ವಯಂ ಮೂಲ ಸೌಕರ್ಯ ಕಲ್ಪಿಸಿಕೊಂಡರೆ ಎಸ್ಕಾಂ ವತಿಯಿಂದ ಟ್ರಾನ್ಸ್ ಫಾರ್ಮರ್ ಒದಗಿಸಿ ಪಂಪ್ಸೆಟ್ ಗಳನ್ನು ಸಕ್ರಮಗೊಳಿಸಲಾಗುವುದು ಎಂದು ಹೇಳಿದ್ದಾರೆ.

 2023ರ ಸೆಪ್ಟೆಂಬರ್ 22ರ ನಂತರ ಸ್ಥಾಪಿಸಿದ ಅಕ್ರಮ ಕೃಷಿ ಪಂಸೆಟ್ ಗಳಿಗೆ ರೈತರು ಸ್ವಂತ ವೆಚ್ಚದಲ್ಲಿ ಲೈನ್ ಸೇರಿದಂತೆ ಮೂಲಸೌಕರ್ಯ ಕಲ್ಪಿಸಿಕೊಂಡರೆ ಎರಡು ಅಥವಾ ಅದಕ್ಕಿಂತ ಹೆಚ್ಚು ಪಂಪ್ಸೆಟ್ ಗಳಿಗೆ ಎಸ್ಕಾಂಗಳ ವತಿಯಿಂದಲೇ ಟ್ರಾನ್ಸ್ ಫಾರ್ಮರ್ ಒದಗಿಸಿ ಪಂಪ್ಸೆಟ್ ಗಳನ್ನು ಸಕ್ರಮಗೊಳಿಸಲಾಗುವುದು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ 2004ರಲ್ಲಿ ಕೃಷಿ ಪಂಪ್ಸೆಟ್ ಗಳ ಅಕ್ರಮ ಸಕ್ರಮ ಯೋಜನೆ ಜಾರಿಗೆ ಬಂದಿದೆ. ಆದರೂ 2023ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ 4.5 ಲಕ್ಷ ಅಕ್ರಮ ಕೃಷಿ ಪಂಪ್ಸೆಟ್ ಗಳು ಇದ್ದವು. ಈ ಹಿನ್ನೆಲೆಯಲ್ಲಿ 2023ರ ಸೆಪ್ಟೆಂಬರ್ 22ಕ್ಕೆ ಮೊದಲು ಸಂಪರ್ಕ ಪಡೆದಿದ್ದ ಅಕ್ರಮ ಪಂಪ್ಸೆಟ್ ಗಳನ್ನು ಸಕ್ರಮಗೊಳಿಸಲು ನಿರ್ಧರಿಸಿ ಇದುವರೆಗೆ 2.5 ಲಕ್ಷ ಪಂಪ್ಸೆಟ್ ಗಳನ್ನು ಸಕ್ರಮಗೊಳಿಸಲಾಗಿದೆ. ಉಳಿದವುಗಳನ್ನು ವರ್ಷದೊಳಗೆ ಸಕ್ರಮಗೊಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

2023ರ ಸೆಪ್ಟೆಂಬರ್ 22ರ ನಂತರ ಅಳವಡಿಸಿದ್ದ ಅಕ್ರಮ ಪಂಪ್ಸೆಟ್ ಗಳ ಸಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಹೀಗಾಗಿ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿಗೊಳಿಸಲಾಗಿದೆ. ಅಕ್ರಮ ಪಂಪ್ಸೆಟ್ ಹೊಂದಿದ ರೈತರು ಎಸ್ಕಾಂಗಳಿಗೆ ನಿಗದಿತ ಠೇವಣಿ ಪಾವತಿಸಿ ಅವರ ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ನಂತರ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪಂಪ್ಸೆಟ್ ಗಳಿಗೆ ಅವುಗಳ ಸಾಮರ್ಥ್ಯ ಆಧರಿಸಿ ಎಸ್ಕಾಂಗಳ ವತಿಯಿಂದ ಟ್ರಾನ್ಸ್ ಫಾರ್ಮರ್ ಒದಗಿಸಿ ವರ್ಗಗಳನ್ನು ಸಕ್ರಮಗೊಳಿಸಲಾಗುವುದು ಎಂದು ಹೇಳಿದ್ದಾರೆ.

ವಿದ್ಯುತ್ ಜಾಲದಿಂದ 500 ಮೀಟರ್ ಒಳಗಿರುವ ಎಲ್ಲಾ ಕೃಷಿ ಪಂಪ್ಸೆಟ್ ಗಳಿಗೆ ನವೀಕೃತ ಶೀಘ್ರ ಸಂಪರ್ಕ ಯೋಜನೆ ಅನ್ವಯವಾಗಲಿದೆ. 500 ಮೀಟರ್ ಗಿಂತ ದೂರ ಇರುವ ಪಂಪ್ಸೆಟ್ ಗಳಿಗೆ ಸೋಲಾರ್ ಪಂಪ್ಸೆಟ್ ಗಳನ್ನು ಕಡ್ಡಾಯವಾಗಿ ಅಳವಡಿಸಬೇಕಿದೆ. ಸೋಲಾರ್ ಪಂಪ್ಸೆಟ್ ಗಳಿಗೆ ಕೇಂದ್ರದಿಂದ ಶೇಕಡ 30ರಷ್ಟು, ರಾಜ್ಯ ಸರ್ಕಾರದಿಂದ ಶೇಕಡ 50ರಷ್ಟು ಸಬ್ಸಿಡಿ ನೀಡಲಾಗುವುದು ರೈತರು ಶೇಕಡ 20ರಷ್ಟು ಮೊತ್ತವನ್ನು ಪಾವತಿಸಬೇಕಿದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read