ಬೆಂಗಳೂರು : ರಾಜ್ಯ ಸರ್ಕಾರದ 2 ವರ್ಷಗಳ ವೈಫಲ್ಯತೆ ಬಗ್ಗೆ ಆರೋಪ ಪಟ್ಟಿ ಎಂಬ ಶೀರ್ಷಿಕೆಯಡಿಯಲ್ಲಿ ದೃಷ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ, ತಿರುಚುವಿಕೆ ಹಾಗೂ ಸುಳ್ಳು ಸಂಗತಿಗಳನ್ನು ಅಳವಡಿಸಿಕೊಂಡು ಕರ್ನಾಟಕ ಭಾರತೀಯ ಜನತಾ ಪಕ್ಷವು ಸುಳ್ಳು ಪ್ರಚಾರ ಮಾಡಿರುವ ಬಗ್ಗೆ ಬೆಂಗಳೂರಿನ ಮಾನ್ಯ 42ನೇ ಸಿಎಂಎಂ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದಮೆ ದಾಖಲಿಸಲು ರಾಜ್ಯ ಸರ್ಕಾರವು ನಿರ್ಧರಿಸಿದೆ.
ಈ ಸಂಬಂಧ, ಸರ್ಕಾರದ ಕಾರ್ಯದರ್ಶಿ, ಸಿಆಸು ಇಲಾಖೆ ಇವರನ್ನು ದೂರು ದಾಖಲಿಸಲು ಅಧಿಕೃತಗೊಳಿಸಿದೆ. ಮುಂದುವರೆದು, ಶ್ರೀ ಬಿ.ಎಸ್. ಪಾಟೀಲ್, ಸರ್ಕಾರಿ ಅಭಿಯೋಜಕರು, 67ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ, ಬೆಂಗಳೂರು ಮತ್ತು ಶ್ರೀಮತಿ ಶೈಲಜಾ ನಾಯಕ್, ಸರ್ಕಾರಿ ಅಭಿಯೋಜಕರು, 61ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ, ಬೆಂಗಳೂರು ಇವರುಗಳನ್ನು ಪ್ರಕರಣ ನಿರ್ವಹಿಸಲು ನಿಯೋಜಿಸಿದೆ. ಅಲ್ಲದೇ, ಶ್ರೀ ಕುಮಟಾ ಪ್ರಕಾಶ್, ಸರ್ಕಾರದ ಉಪ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ) ಇವರನ್ನು ಈ ಪ್ರಕರಣದಲ್ಲಿ ಎಲ್ಲಾ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ಸರ್ಕಾರಿ ಅಭಿಯೋಜಕರಿಗೆ ಸಂಪೂರ್ಣ ದಾಖಲೆ, ಮಾಹಿತಿ ನೀಡಲು ಇವರನ್ನು ನೇಮಿಸಿ ಆದೇಶಿಸಲಾಗಿದೆ.
