ಪಾಟ್ನಾ: ಬಿಹಾರ ಮಾಜಿ ಮುಖ್ಯಮಂತ್ರಿ, ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಕುಟುಂಬದಲ್ಲಿ ಮತ್ತೊಂದು ಬಿರುಗಾಳಿ ಬೀಸಿದ್ದು, ಲಾಲು ಪ್ರಸಾದ್ ಯಾದವ್ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರನ್ನು ಆರ್ ಜೆಡಿಯಿಂದ ಉಚ್ಛಾಟನೆ ಮಾಡಲಾಗಿದೆ.
ತೇಜ್ ಪ್ರತಾಪ್ ಯಾದವ್ ಮತ್ತೊಂದು ಮದುವೆಯಾಗಿದ್ದಾರೆ ಎಂಬ ಸುದ್ದಿ ಬಿಹಾರ ರಾಜಕೀಯದಲ್ಲಿ ಭಾರಿ ಸುದ್ದಿ ಮಾಡಿತ್ತು. ಅಲ್ಲದೇ ತೇಜ್ ಪ್ರತಾಪ್ ಯಾದವ್ ಎರಡು ದಿನಗಳ ಹಿಂದೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡು ‘ನಾನು ಅನುಷ್ಕಾ ಯಾದವ್ ಜೊತೆ ಕಳೆದ 12 ವರ್ಷಗಳಿಂದ ಸಂಬಂಧದಲ್ಲಿದ್ದೇನೆ. ಇದನ್ನು ಮೊದಲೇ ಹೇಳಬೇಕೆಂದಿದ್ದೆ. ಆದರೆ ಕಾಲ ಕೂಡಿ ಬಂದಿರಲಿಲ್ಲ. ಇದನ್ನು ನೀವು ಅರ್ಥ ಮಾಡಿಕೊಳ್ಳುತ್ತೀರ ಎಂದು ಭಾವಿಸಿದ್ದೇನೆ’ ಎಂದು ಬರೆದುಕೊಂಡಿದ್ದರು.
ಈ ಪೋಸ್ಟ್ ಬಳಿಕ ತೇಜ್ ಪ್ರತಾಪ್ ಯಾದವ್ ಹಾಗೂ ಅನುಷ್ಕಾ ಯಾದವ್ ಜೊತೆಯಾಗಿರುವ ಹಾಗೂ ಕೆಲ ಖಾಸಗಿ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಇದರಿಂದ ತೀವ್ರ ಮುಜುಗರಕ್ಕೀಡಾದ ಲಾಲು ಪ್ರಸಾದ್ ಯಾದವ್ ಮಗನನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿದ್ದಾರೆ.
‘ತೇಜ್ ಪ್ರತಾಪ್ ಕೆಲಸದಿಂದ ನನಗೆ ನೋವಾಗಿದೆ. ನನ್ನ ಪಕ್ಷದಲ್ಲಿನ ಸಾರ್ವಜನಿಕ ಜೀವನದ ಸಿದ್ಧಾಂತಕ್ಕೂ ವಿರುದ್ಧವಾಗಿದೆ. ತೇಜ್ ಪ್ರತಾಪ್ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಹಾಗೆ ನಡೆದುಕೊಂಡಿಲ್ಲ. ಇದರಿಂದ ಪಕ್ಷ ಕಟ್ಟುವ ಕೆಲಸಕ್ಕೆ ಹಿನ್ನಡೆಯಾಗಿದೆ. ಆತ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹೊಂದಿರಬಹುದು. ಆದರೆ ಈಗ ಆತ ಮಾಡಿರುವ ತಪ್ಪಿನಿಂದಾಗಿ ಆತ ಸ್ವತಂತ್ರವಗಿಯೇ ಇರಬೇಕಾಗುತ್ತದೆ. ಆತನಿಗೂ ಪಕ್ಷಕ್ಕೂ, ಕುಟುಂಬಕ್ಕೂ ಸಂಬಂಧವಿಲ್ಲ’ ಎಂದು ಉಚ್ಛಾಟನೆಯ ಆದೇಶದ ಪತ್ರದಲ್ಲಿ ಲಾಲು ಪ್ರಸಾದ್ ಯಾದವ್ ತಿಳಿಸಿದ್ದಾರೆ.