ಯಾದಗಿರಿ: ಯಾದಗಿರಿಯಲ್ಲಿ ಕಾಂಗ್ರೆಸ್ ಕಚೇರಿಗೆ ಬೆಂಕಿ ಇಟ್ಟ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆರೋಪಿಗಳ ಪತ್ತೆಗೆ ಮುಂದಾದ ಪೊಲೀಸರೇ ಶಾಕ್ ಆಗಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೆಂಕಿ ಹಚ್ಚಿದ್ದು, ಸ್ವತಃ ಕಾಂಗ್ರೆಸ್ ಕಾರ್ಯಕರ್ತರು ಎಂಬುದು ಅಚ್ಚರಿಗೆ ಕಾರಣವಾಗಿದೆ.
ಯಾದಗಿರಿ ನಗರದ ಕನಕ ವೃತ್ತದ ಬಳಿಯಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ ಇಬ್ಬರ ಪೈಕಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಶಂಕರ್ ಗೂಳಿ ಬಂಧಿತ ಆರೋಪಿ. ಇನ್ನೋರ್ವ ಪರಾರಿಯಾಗಿದ್ದಾನೆ. ಶಂಕರ್ ಗೂಳಿ ಕೂಡ ಕಾಂಗ್ರೆಸ್ ಕಾರ್ಯಕರ್ತ.
ಮಹಿಳಾ ಘಟಕದ ಅಧ್ಯಕ್ಷೆ ಬದಲಾವಣೆ ವಿಚಾರವಾಗಿ ಮನಸ್ತಾಪದಿಂದ ಶಂಕರ್ ಗೂಳಿ ಈ ಕೃತ್ಯವೆಸಗಿರುವುದು ಬಹಿರಂಗವಾಗಿದೆ. ಕೆಲದಿನಗಳ ಹಿಂದೆ ಜಿಲ್ಲಾ ಘಟಕದ ಅಧ್ಯಕ್ಷೆಯಾಗಿ ನಿಲೋಫರ್ ಬಾದಲ್ ಆಯ್ಕೆಯಾಗಿದ್ದರು. ತನ್ನ ಪತ್ನಿ ಮಂಜುಳಾರನ್ನು ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನದಿಂದ ಕೆಳಗಿಸಿದಕ್ಕೆ ಮಂಜುಳಾ ಪತಿ ಶಂಕರ್ ಗೂಳಿ ಕೋಪಗೊಂಡಿದ್ದ. ಇದೇ ಕಾರಣಕ್ಕೆ ಕಾಂಗ್ರೆಸ್ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಪಿಯು ಕಾಲೇಜು ಉಪನ್ಯಾಸಕನೂ ಆಗಿರುವ ಶಂಕರ್ ಗೂಳಿ, ರೌಡಿಶೀಟರ್ ಬಾಪುಗೌಡ ಅಗತೀರ್ಥ ಜೊತೆಗೂಡಿ ಕಾಂಗ್ರೆಸ್ ಕಚೇರಿಗೆ ಬೆಂಕಿಯಿಟ್ಟಿದ್ದಾನೆ. 10 ಲೀಟರ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ. ತಪ್ಪಿಸಿಕೊಂಡಿರುವ ರೌಡಿಶೀಟರ್ ಗೆ ಬಲೆ ಬೀಸಲಾಗಿದೆ.