ಉಡುಪಿ: ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ ಹಾಗೂ ಅವರ ತಂದೆ ನಡುವಿನ ಜಗಳ ಮತ್ತಷ್ಟು ತಾರಕಕ್ಕೇರಿದೆ. ಚೈತ್ರಾ ಕುಂದಾಪುರ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ತಂದೆ ಬಾಲಕೃಷ್ಣ ನಾಯಕ್ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಸ್ತಿಗಾಗಿ ತನ್ನ ಮಗಳು ಚೈತ್ರಾ ಕುಂದಾಪುರ ನನ್ನ ಕೊಲೆ ಮಾಡಿಸಬಹುದು. ನನಗೆ ಕೊಲೆ ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಿ ಬಾಲಕೃಷ್ಣ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚೈತ್ರಾ ಕುಂದಾಪುರ ಆಕೆಯ ಸ್ನೇಹಿತ ಶ್ರೀಕಾಂತ್ ನನ್ನು ಮದುವೆಯಾಗುವ ಸುದ್ದಿ ತಿಳಿದು ಆತನನ್ನು ಮದುವೆಯಾಗದಂತೆ, ಆತ ಸರಿ ಇಲ್ಲ ಎಂದು ಹೇಳಿದ್ದೆ. ಅದಕ್ಕೆ ಚೈತ್ರಾ, ನನ್ನ ಬಳಿ ಬಂದು ಆತನನ್ನು ಬಿಟ್ಟು ಬೇರೆ ಮದುವೆಯಾಗಬೇಕು ಎನ್ನುವುದಾದರೆ 5 ಲಕ್ಷ ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದ್ದಳು. ಬಳಿಕ ಮದುವೆಗೆ ಬಾರದೇ ಹೋದರೆ ಭೂಗತ ದೊರೆಗಳ ಮೂಲಕ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾಳೆ.
ಆಸ್ತಿಗಾಗಿ ಯಾವ ಹೇಯ ಕೃತ್ಯವನ್ನಾದರೂ ಎಸಗಲು ಅವಳು ಸಿದ್ಧಳಿದ್ದಾಳೆ. ನಾನು ಸತ್ತುಹೋಗಿದ್ದೇನೆ ಎಂದು ಹೇಳಿಕೊಂಡು ಬಂದಿದ್ದಾಳೆ. ನನಗೆ ರಕ್ಷಣೆ ನೀಡಿ ಎಂದು ಬಾಲಕೃಷ್ಣ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಚೈತ್ರಾ ಕುಂದಾಪುರ ಅವರ ಹಣದ ವ್ಯವಹಾರದ ಬಗ್ಗೆಯೂ ದೂರಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಚೈತ್ರಾ ಕುಂದಾಪುರ ವಿರುದ್ಧ ಪ್ರಕರಣ ದಾಖಲಾಗಿದೆ.