ಮುಂಬೈ, ಮೇ 21: ಡ್ಯಾಷ್ಹಂಡ್ ತಳಿಯ ನಾಯಿಗಳು ತಮ್ಮ ನಿಷ್ಠೆ ಮತ್ತು ಮುದ್ದು ಸ್ವಭಾವಕ್ಕೆ ಹೆಸರುವಾಸಿ. ಆದರೆ, ಕೆಲವೊಮ್ಮೆ ಅವುಗಳು ಸ್ವಲ್ಪ ಸೋಮಾರಿಯಾಗಿರುವುದುಂಟು. ಇದಕ್ಕೆ ತಾಜಾ ಉದಾಹರಣೆಯಾಗಿ, ಮ್ಯಾಪಲ್ ಎಂಬ ಡ್ಯಾಷ್ಹಂಡ್ ನಾಯಿಯ ವಿಡಿಯೋ ಈಗ ಟಿಕ್ಟಾಕ್ನಲ್ಲಿ ವೈರಲ್ ಆಗಿದೆ. ತನ್ನ ಮುದ್ದಾದ ನಾಯಿಯನ್ನು ವಾಕಿಂಗ್ಗೆ ಕರೆದೊಯ್ಯಲು ಅದರ ಮಾಲೀಕರು ಕಂಡುಕೊಂಡ ಹಾಸ್ಯಭರಿತ ಉಪಾಯ, ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ.
ಮ್ಯಾಪಲ್ನ ಮಾಲೀಕರು, ಜೆನ್, ತಮ್ಮ ನಾಯಿಯನ್ನು ವಾಕಿಂಗ್ಗೆ ಕರೆದೊಯ್ಯಲು ಹಗ್ಗ ಹಿಡಿದು ಸಿದ್ಧರಾಗುತ್ತಾರೆ. ಆದರೆ, ಪುಟ್ಟ ಮ್ಯಾಪಲ್ಗೆ ಹೊರಗೆ ಹೋಗುವ ಮನಸ್ಸು ಇದ್ದಂತಿಲ್ಲ. ಈ ಸವಾಲನ್ನು ಮೆಟ್ಟಿ ನಿಲ್ಲಲು ಜೆನ್ ಒಂದು ಚಾಣಾಕ್ಷ ತಂತ್ರವನ್ನು ರೂಪಿಸಿದ್ದಾರೆ. ಅವರು ತಮ್ಮ ನಾಯಿಯ ಹಗ್ಗವನ್ನು, ಅದರ ತುದಿಗೆ ರುಚಿಕರವಾದ ನಾಯಿ ತಿಂಡಿಯನ್ನು ಕಟ್ಟಿ, ಮೀನು ಹಿಡಿಯುವ ಬೆಸ್ತನಂತೆ ಬಳಸಿದ್ದಾರೆ !
ಕೆಲವೇ ಕ್ಷಣಗಳಲ್ಲಿ “ಮೀನುಗಾರಿಕೆ ರಾಡ್” ಹೊರಗೆ ಬೀಸಲಾಗುತ್ತದೆ. ಮತ್ತು, ನಿರೀಕ್ಷೆಯಂತೆ, ಮುದ್ದು ಮ್ಯಾಪಲ್ ಆಮಿಷಕ್ಕೆ ಬಲಿಯಾಗುತ್ತದೆ. ಆರಂಭದಲ್ಲಿ ಸ್ವಲ್ಪ ಎಚ್ಚರಿಕೆಯಿಂದಿದ್ದರೂ, ಆ ತಿಂಡಿಯ ಆಕರ್ಷಣೆಯನ್ನು ತಡೆಯಲಾಗದೆ, ಮ್ಯಾಪಲ್ ಅದನ್ನು ಕಚ್ಚಿಬಿಡುತ್ತದೆ. ಹೀಗೆ, ತನ್ನ ನೆಚ್ಚಿನ ಟ್ರೀಟ್ನ ಹಿಂದೆಯೇ ಮ್ಯಾಪಲ್ ವಾಕಿಂಗ್ಗೆ ಹೊರಡುತ್ತದೆ. ಈ ಮೋಜಿನ ಮತ್ತು ಬುದ್ಧಿವಂತಿಕೆಯ ತಂತ್ರವು ಈಗ ಟಿಕ್ಟಾಕ್ ಬಳಕೆದಾರರ ಮನಗೆದ್ದಿದೆ.