ಗದಗ: ಗದಗ ಜಿಲ್ಲೆ ರೋಣ ತಾಲೂಕಿನ ಮುಗಳಿ ಗ್ರಾಮದ ಹೊರವಲಯದಲ್ಲಿರುವ ಜಮೀನಿನ ತೆರೆದ ಬಾವಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.
30 ವರ್ಷದ ಶಂಕ್ರಪ್ಪ ಅಲಿಯಾಸ್ ಮತ್ತು ಕೊಳ್ಳಿ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತನ ಪತ್ನಿ ಮತ್ತು ಪ್ರಿಯಕರ ಕೊಲೆ ಮಾಡಿ ಬಾವಿಗೆ ಎಸೆದಿರುವ ಆರೋಪ ಕೇಳಿ ಬಂದಿದೆ.
ಚಾಲಕನಾಗಿ ಕೆಲಸ ಮಾಡುತ್ತಿದ್ದ ಶಂಕ್ರಪ್ಪ ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ವಿದ್ಯಾರನ್ನು ಪ್ರೀತಿಸಿ ಮದುವೆಯಾಗಿದ್ದ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ಶಿವಕುಮಾರ್ ಎಂಬುವರೊಂದಿಗೆ ವಿದ್ಯಾಗೆ ಅಕ್ರಮ ಸಂಬಂಧ ಬೆಳೆದಿತ್ತು. ಈ ವಿಷಯ ಶಂಕ್ರಪ್ಪನಿಗೆ ಗೊತ್ತಾಗಿದ್ದರಿಂದ ಹೆದರಿದ ಶಿವಕುಮಾರ್ ಮತ್ತು ವಿದ್ಯಾ ಶಂಕ್ರಪ್ಪನನ್ನು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಕೊಲೆ ಮಾಡಿದ ನಂತರ ಶವವನ್ನು ಕೈಕಾಲು ಕಟ್ಟಿ ಹಾಸಿಗೆಯಲ್ಲಿ ಸುತ್ತಿ ಮುಗಳಿ ಗ್ರಾಮದ ಜಮೀನಿನ ಬಾವಿಯಲ್ಲಿ ಎಸೆದಿದ್ದಾರೆ. ಮಂಗಳವಾರ ಬಾವಿಯಲ್ಲಿ ಶವ ಪತ್ತೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿ ವಿದ್ಯಾ ಮತ್ತು ಶಿವಕುಮಾರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.