ಬೆಂಗಳೂರು: ರಾಜ್ಯಕ್ಕೆ ಮೇ 27 ಅಥವಾ 28ರ ವೇಳೆಗೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸಾಮಾನ್ಯವಾಗಿ ಜೂನ್ 1ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಆಗಮಿಸಲಿದೆ. ಈ ಬಾರಿ ನಿರೀಕ್ಷೆಗೆ ಮೊದಲೇ ರಾಜ್ಯಕ್ಕೆ ಮುಂಗಾರು ಮಾರುತಗಳು ಚುರುಕಾಗಿದ್ದು, ಅವಧಿಗೂ ಒಂದು ವಾರ ಮೊದಲೇ ರಾಜ್ಯಕ್ಕೆ ಪ್ರವೇಶಿಸಲಿದೆ ಎಂದು ಹೇಳಲಾಗಿದೆ.
ಮುಂಗಾರು ಆರಂಭಕ್ಕೆ ಪೂರಕ ವಾತಾವರಣ ಕೂಡ ಆರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗಿದೆ. ಈಗಾಗಲೇ ಮುಂಗಾರು ಮಾರುತಗಳು ಶ್ರೀಲಂಕಾ ಪ್ರವೇಶಿಸಿವೆ. ಮೇ 25ರ ವೇಳೆಗೆ ಲಕ್ಷದ್ವೀಪ ಮತ್ತು ಕೇರಳ ರಾಜ್ಯ ಪ್ರವೇಶಿಸುವ ಮುಂಗಾರು ಮಾರುತಗಳು ನಂತರ ಕರ್ನಾಟಕಕ್ಕೆ ಎಂಟ್ರಿ ಕೊಡಲಿವೆ.
ಕಳೆದ ವರ್ಷ ಮೇ 30ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಿದ್ದು, ಜೂನ್ 2ರಂದು ರಾಜ್ಯಕ್ಕೆ ಕಾಲಿಟ್ಟಿತ್ತು. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಲಕ್ಷಣಗಳಿದ್ದು, ವಾಯುಭಾರ ಕುಸಿತ ಪ್ರಬಲಗೊಂಡು ಮುಂಗಾರು ಮಾರುತಗಳನ್ನು ಸೆಳೆದರೆ ಮುಂಗಾರು ಪ್ರವೇಶಕ್ಕೆ ಹಿನ್ನಡೆ ಆಗಬಹುದು. ಇಲ್ಲವಾದಲ್ಲಿ ಯಥಾ ಪ್ರಕಾರ ನಿರೀಕ್ಷೆಯಂತೆ ರಾಜ್ಯದಲ್ಲಿ ಮುಂಗಾರು ಆರಂಭಗೊಳ್ಳಲಿದೆ ಎಂದು ಹೇಳಲಾಗಿದೆ.