ಉಡುಪಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವರುನಾರ್ಭಟ ಜೋರಾಗಿದ್ದು, ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ರಸ್ತೆಗಳು ಜಲಾವೃತಗೊಂಡಿವೆ.
ಜಡಿ ಮಳೆಗೆ ಉಡುಪಿ ಜಿಲ್ಲೆಯ ಜನರು ತತ್ತರಿಸಿದ್ದಾರೆ. ಪ್ರವಾಹದಂತೆ ಹೆದ್ದಾರಿ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು, ಅಂಗಡಿಗಳಿಗೆ ಮಣ್ಣು ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಸಂಚಾರ ಮಾರ್ಗವಿಲ್ಲದೇ ವಾಹನ ಸವರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಉಡುಪಿ ನಗರದ ಅಪ್ಸರಾ ಐಸ್ ಕ್ರೀಂ ಮಳಿಗೆಗೆ ಮಣ್ಣು ನೀರು ನುಗ್ಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಫ್ರಿಡ್ಜ್, ಕೂಲರ್ ಗಳು ಹಾನಿಯಾಗಿವೆ. ರಸ್ತೆ ಒತ್ತುವರಿ ಹಾಗೂ ಕಟ್ಟಡಗಳ ಪಾರ್ಕಿಂಗ್ ಏರಿಯಾ ಒತ್ತುವರಿಯಿಂದಾಗಿ ಚರಂಡಿಯೇ ಇಲ್ಲವಾಗಿದ್ದು, ಇದರಿಂದಾಗಿ ಭಾರಿ ಮಳೆಗೆ ಹೆದ್ದಾರಿ ಮೇಲೆ ಪ್ರವಾಹದಂತೆ ನೀರು ಹರಿಯುತ್ತಿದೆ. ತಗ್ಗುಪ್ರದೇಶದಲ್ಲಿರುವ ಮನೆಗಳು ಜಲಾವೃತಗೊಂಡಿವೆ.
ಮಣಿಪಾಲ, ಪರ್ಕಳ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬೆಟ್ಟದ ಮೇಲಿಂದ ದುಮ್ಮಿಗ್ಗಿ ಹರಿಯುತ್ತಿರುವ ಮಣ್ಣು ನೀರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ ಲಕ್ಷ್ಮೀಂದ್ರ ನಗರದ ಇಳಿಜಾರು ಪ್ರದೇಶ ಕೆರೆಯಂತಾಗಿದ್ದು, ಸಾರ್ವಜನಿಕರು, ಸ್ಥಳೀಯರು, ಅಧಿಕಾರಿಗಳ ಬೇಜವಾಬ್ದಾರಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮತ್ತು ಸುತ್ತಮುತ್ತಲ ಬಹುಮಹಡಿ ಕಟ್ಟಡಗಳ ಕಾಲುವೆಯನ್ನು ಒತ್ತುವರಿ ಮಾಡಿರುವುದರಿಂದ ನೀರು ಹರಿಯಲು ಜಾಗವಿಲ್ಲದಿರುವುದೇ ಸಮಸ್ಯೆಗೆ ಕಾರಣ ಎಂದು ಕಿಡಿಕಾರಿದ್ದಾರೆ.
ಈ ನಡುವೆ ಉಡುಪಿ ಜಿಲ್ಲೆಯಾದ್ಯಂತ ಮಳೆ ಅಬ್ಬರ ಇನ್ನಷ್ಟು ಜೋರಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.