ಶಿವಮೊಗ್ಗ: ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರಿಸಿಕೊಂಡಿದ್ದ ಆರೋಪಿಯ ಮೇಲೆ ಹೊಳೆಹೊನ್ನೂರು ಠಾಣೆ ಪೋಲೀಸರು ಫೈರಿಂಗ್ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.
ಶಿವಮೊಗ್ಗದ ಬೊಮ್ಮನಕಟ್ಟೆ ಬಡಾವಣೆಯ ನಿವಾಸಿ ಮಂಜುನಾಥ ಯಾನೆ ಚಳಿ ಮಂಜ(41) ಬಂಧಿತ ಆರೋಪಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಚೆನ್ನಪ್ಪನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಹೊಳೆಹೊನ್ನೂರು ಸಮೀಪದ ಹೊಸಕೊಪ್ಪ ರಸ್ತೆಯಲ್ಲಿ ಅಡಿಕೆ ವ್ಯಾಪಾರಿ ಹೇಮಣ್ಣ(68) ಅವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ. ಶಿವಮೊಗ್ಗ ತಾಲೂಕಿನ ಹೊಳಲೂರು ಸಮೀಪ ಮಂಜುನಾಥ ಅಡಗಿಕೊಂಡಿರುವ ಮಾಹಿತಿ ಪಡೆದ ಇನ್ಸ್ಪೆಕ್ಟರ್ ಲಕ್ಷ್ಮಿಪತಿ ನೇತೃತ್ವದ ತಂಡ ಬಂಧಿಸಲು ತೆರಳಿದೆ.
ಈ ವೇಳೆ ಆರೋಪಿ ಮಂಜುನಾಥ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದ್ದಾನೆ. ಕೂಡಲೇ ಇನ್ಸ್ಪೆಕ್ಟರ್ ಲಕ್ಷ್ಮಿಪತಿ ಆತನ ಕಾಲಿಗೆ ಗುಂಡು ಹಾರಿಸಿದ್ದು, ಆತನನ್ನು ಬಂಧಿಸಿದ್ದಾರೆ. ಮಂಜುನಾಥ್ ವಿರುದ್ಧ ವಿವಿಧ ಠಾಣೆಗಳಲ್ಲಿ 9 ಪ್ರಕರಣ ದಾಖಲಾಗಿವೆ ಎನ್ನಲಾಗಿದೆ.