ಅಮರಾವತಿ: ಆಟವಾಡಲೆಂದು ಕಾರಿನೊಳಗೆ ಹತ್ತಿದ ನಾಲ್ವರು ಮಕ್ಕಳು ಕಾರಿನ ಡೋರ್ ಲಾಕ್ ಆಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ವಿಜಯನಗರಂ ಜಿಲ್ಲೆಯ ದ್ವಾರಪುಡಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಮಂಗಿ ಉದಯ್ (8), ಬುರ್ಲೆ ಚಾರುಮತಿ (8), ಬುರ್ಲೆ ಚರಿಷ್ಮಾ (6) ಕಂಡಿ ಮನಸ್ವಿನಿ (6) ಮೃತ ಮಕ್ಕಳು.
ದ್ವಾರಪುಡಿ ಗ್ರಾಮದಲ್ಲಿ ವ್ಯಕ್ತಿಯೋರ್ವರು ತಮ್ಮ ಕಾರು ನಿಲ್ಲಿಸಿ, ಲಾಕ್ ಮಾಡುವುದನ್ನು ಮರೆತಿದ್ದಾರೆ. ನಾಲ್ವರು ಮಕ್ಕಳು ಆಟವಾಡುತ್ತಿದ್ದಾಗ ಮಳೆ ಬರುತ್ತಿದ್ದಂತೆ ಕಾರಿನ ಡೋರ್ ತೆಗೆದು ಕಾರು ಹತ್ತಿದ್ದಾರೆ. ಈ ವೇಳೆ ಕಾರಿನ ಬಾಗಿಲು ಏಕಾಏಕಿ ಲಾಕ್ ಆಗಿದೆ. ಕಾರಿನೊಳಗೆ ಲಾಕ್ ಆದ ನಾಲ್ವರು ಮಕ್ಕಳು ಹೊರಬರಲಾಗದೇ ಒದ್ದಾಡಿದ್ದಾರೆ. ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ.
ಮಕ್ಕಳು ಮನೆ ಬಳಿ ಆಟವಾಡುತಿದ್ದವರು ಕಾಣದಿದ್ದಾಗ ಮೂರು ಗಂಟೆಗಳ ಕಾಲ ಪೋಷಕರು ಹುಡುಕಾಟ ನಡೆಸಿದ್ದಾರೆ. ಕರೆದರೂ ಮಕ್ಕಳ ಸುಳಿವಿಲ್ಲ. ಮನೆ ಬಳಿ ನಿಲ್ಲಿಸಿದ್ದ ಕಾರಿನ ಬಳಿ ಬಂದು ನೋಡಿದಾಗ ಕಾರಿನೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ನಾಲ್ವರು ಮಕ್ಕಳಿರುವುದು ಕಂಡುಬಂದಿದೆ. ಕಾರಿನ ಗ್ಲಾಸ್ ಒಡೆದು ನಾಲ್ವರು ಮಕ್ಕಳನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮಕ್ಕಳ ಪ್ರಾಣಪಕ್ಷಿ ಹಾರಿಹೋಗಿತ್ತು.
ಕಾರು ನಿಲ್ಲಿಸಿ ಲಾಕ್ ಮಾಡದೇ ತೆರಳಿದರೆ ಎಂಥಹ ಅನಾಹುತ ಸಂಭವಿಸಬಹುದು ಎಂಬುದಕ್ಕೆ ಈ ದುರಂತ ಸಾಕ್ಷಿ.