ಪುಣೆಯ 40 ವರ್ಷದ ಟೆಕ್ಕಿಯೊಬ್ಬರು ಹೃದಯಾಘಾತಕ್ಕೆ ಒಳಗಾಗಿದ್ದು, ವೈದ್ಯರಿಗೂ ಅಚ್ಚರಿ ಮೂಡಿಸಿದೆ. ಏಕೆಂದರೆ ಅವರ ಹೃದಯದ ಅಪಧಮನಿಗಳಲ್ಲಿ ಯಾವುದೇ ಬ್ಲಾಕೇಜ್ ಕಂಡುಬಂದಿಲ್ಲ. ಬನೇರ್‌ನ ಐಟಿ ಉದ್ಯೋಗಿ ವಿಕ್ರಮ್ (ಹೆಸರು ಬದಲಾಯಿಸಲಾಗಿದೆ), ತೀವ್ರವಾದ ಎದೆನೋವು ಮತ್ತು ಅಸ್ವಸ್ಥತೆಯನ್ನು ಮೊದಲು ಗ್ಯಾಸ್ಟ್ರಿಕ್ ಸಮಸ್ಯೆ ಎಂದು ನಿರ್ಲಕ್ಷಿಸಿದ್ದರು. ಆದರೆ ಆಸ್ಪತ್ರೆಗೆ ದಾಖಲಾದ ನಂತರ ಅವರಿಗೆ ಮಯೋಕಾರ್ಡಿಯಲ್ ಇನ್‌ಫಾರ್ಕ್ಷನ್ ವಿಥ್ ನಾನ್-ಅಬ್ಸ್ಟ್ರಕ್ಟಿವ್ ಕರೋನರಿ ಆರ್ಟರೀಸ್ (MINOCA) ಎಂಬ ಅಪರೂಪದ ಹೃದಯ ಸ್ಥಿತಿ ಇರುವುದು ಪತ್ತೆಯಾಗಿದೆ. ಎದೆಯಲ್ಲಿ ಬಿಗಿತ ಕಾಣಿಸಿಕೊಳ್ಳುವ ಎರಡು ದಿನಗಳ ಮುಂಚೆಯೇ ಸುಸ್ತು ಕಾಣಿಸಿಕೊಂಡಿತ್ತು ಎಂದು ಅವರು ತಿಳಿಸಿದ್ದಾರೆ.
ವೈದ್ಯರು ನಡೆಸಿದ ತಪಾಸಣೆಯಲ್ಲಿ ಇಸಿಜಿಯಲ್ಲಿ ಹೃದಯದ ಅಸಹಜತೆಗಳು ಕಂಡುಬಂದವು. ನಂತರ ಆಂಜಿಯೋಗ್ರಫಿ ಪರೀಕ್ಷೆ ನಡೆಸಿದಾಗ ಯಾವುದೇ ಅಪಧಮನಿ ಬ್ಲಾಕೇಜ್ ಇಲ್ಲದಿರುವುದು ದೃಢಪಟ್ಟಿದೆ.
ಏನಿದು ಮಿನೋಕಾ ?
ಮಿನೋಕಾ (MINOCA) ಎಂಬುದು ಹೃದಯಾಘಾತದ ಒಂದು ಅಪರೂಪದ ವಿಧ. ಸಾಂಪ್ರದಾಯಿಕ ಹೃದಯಾಘಾತಗಳು ಹೃದಯದ ರಕ್ತನಾಳಗಳಲ್ಲಿ ಅಡೆತಡೆ ಉಂಟಾಗುವುದರಿಂದ ಸಂಭವಿಸುತ್ತವೆ. ಆದರೆ ಮಿನೋಕಾದಲ್ಲಿ ಯಾವುದೇ ಸ್ಪಷ್ಟವಾದ ಬ್ಲಾಕೇಜ್ ಇರುವುದಿಲ್ಲ. ಹೀಗಾಗಿ ಇದನ್ನು ಪತ್ತೆಹಚ್ಚುವುದು ಕಷ್ಟ ಮತ್ತು ರೋಗ ನಿರ್ಣಯ ವಿಳಂಬವಾದರೆ ಅಪಾಯಕಾರಿಯಾಗಬಹುದು. ಹೃದಯರೋಗ ತಜ್ಞರ ಪ್ರಕಾರ, ಎಲ್ಲಾ ಹೃದಯಾಘಾತಗಳಲ್ಲಿ ಸುಮಾರು 6% ರಿಂದ 8% ರಷ್ಟು ಪ್ರಕರಣಗಳು ಮಿನೋಕಾದಿಂದ ಉಂಟಾಗುತ್ತವೆ. ಇದು ಯುವ ರೋಗಿಗಳು ಮತ್ತು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಮಿನೋಕಾಕ್ಕೆ ಕಾರಣಗಳೇನು ?
ಮಿನೋಕಾಕ್ಕೆ ಹಲವಾರು ಕಾರಣಗಳಿರಬಹುದು. ರಕ್ತದಲ್ಲಿ ಕರಗಿಹೋಗುವ ತಾತ್ಕಾಲಿಕ ರಕ್ತ ಹೆಪ್ಪುಗಟ್ಟುವಿಕೆ, ತೀವ್ರ ಒತ್ತಡದಿಂದ ಉಂಟಾಗುವ ಹೃದಯದ ರಕ್ತನಾಳಗಳ ಹಠಾತ್ ಸಂಕೋಚನ, ದೇಹದ ಬೇರೆ ಭಾಗದಿಂದ ಹೃದಯಕ್ಕೆ ಬರುವ ರಕ್ತ ಹೆಪ್ಪುಗಟ್ಟುವಿಕೆ, ಹೃದಯದ ಉರಿಯೂತ ಮತ್ತು ತೀವ್ರ ಒತ್ತಡದಿಂದ ಹೃದಯ ಸ್ನಾಯುಗಳ ಹಾನಿ ಇದಕ್ಕೆ ಕಾರಣವಾಗಬಹುದು. ಇದರ ಜೊತೆಗೆ ಹೃದಯದ ಸೂಕ್ಷ್ಮ ರಕ್ತನಾಳಗಳ ಕಾರ್ಯನಿರ್ವಹಣೆಯಲ್ಲಿನ ತೊಂದರೆ (ಮೈಕ್ರೋವಾಸ್ಕ್ಯುಲರ್ ಡಿಸ್ಫಂಕ್ಷನ್) ಕೂಡ ಒಂದು ಪ್ರಮುಖ ಕಾರಣವಾಗಿದೆ. ಈ ಸಣ್ಣ ರಕ್ತನಾಳಗಳು ಸಾಮಾನ್ಯವಾಗಿ ಕಾಣಿಸದ ಕಾರಣ ಅವುಗಳಲ್ಲಿನ ಸಮಸ್ಯೆಗಳನ್ನು ಪತ್ತೆಹಚ್ಚುವುದು ಕಷ್ಟವಾಗುತ್ತದೆ.
ಮಿನೋಕಾ ಒಂದು ಮೌನ ಅಪಾಯಕಾರಿ ಸ್ಥಿತಿಯಾಗಿದ್ದು, ಇದರ ಲಕ್ಷಣಗಳು ಸಾಂಪ್ರದಾಯಿಕ ಹೃದಯಾಘಾತದ ಲಕ್ಷಣಗಳಿಗಿಂತ ಭಿನ್ನವಾಗಿರುತ್ತವೆ. ಹೀಗಾಗಿ ರೋಗನಿರ್ಣಯ ವಿಳಂಬವಾಗುವ ಸಾಧ್ಯತೆ ಇರುತ್ತದೆ. ಅಪಧಮನಿಗಳಲ್ಲಿ ಬ್ಲಾಕೇಜ್ ಇಲ್ಲದ ಕಾರಣ ವೈದ್ಯರು ಸಹ ಇದನ್ನು ಗಂಭೀರವಾಗಿ ಪರಿಗಣಿಸದಿರಬಹುದು. ಆದರೆ ಮಿನೋಕಾ ಸಾಂಪ್ರದಾಯಿಕ ಹೃದಯಾಘಾತದಷ್ಟೇ ಅಪಾಯಕಾರಿಯಾಗಿದ್ದು, ದೀರ್ಘಕಾಲೀನ ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು, ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದು, ನಿಯಮಿತ ವ್ಯಾಯಾಮ ಮಾಡುವುದು ಮತ್ತು ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ.