ಅಮೆರಿಕದ ಉತ್ತರ ಮಿಯಾಮಿಯಲ್ಲಿ ಉಬರ್ ಪ್ರಯಾಣ ಭಯಾನಕ ಅನುಭವವಾಗಿ ಪರಿಣಮಿಸಿದೆ. ರಾಪರ್ ಕ್ರಿಸ್ಸಿ ಸೆಲೆಸ್ ಹಾಗೂ ಆಕೆಯ ಸ್ನೇಹಿತೆಯೊಂದಿಗೆ ದಿಕ್ಕಿನ ಬಗ್ಗೆ ವಾಗ್ವಾದ ನಡೆದ ನಂತರ ಚಾಲಕಿಯೊಬ್ಬರು ಬಂದೂಕು ತೋರಿಸಿ ಬೆದರಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಕ್ರಿಸ್ಸಿ ಸೆಲೆಸ್ ಅವರು ಚಾಲಕಿಗೆ ದಾರಿ ತೋರಿಸಲು ಪ್ರಯತ್ನಿಸುತ್ತಿದ್ದಾಗ ಸಣ್ಣ ವಾಗ್ವಾದ ಪ್ರಾರಂಭವಾಯಿತು. “ಇಗೋ ನೋಡಿ, ಇಲ್ಲಿ ತಿರುವು ಇದೆ. ನೀವು ಎಡಕ್ಕೆ ತಿರುಗಬೇಕು” ಎಂದು ನಾನು ಹೇಳಿದೆ. ಅದಕ್ಕೆ ಆಕೆ, “ಓಹ್, ನೀವು ನನಗೆ ಹೇಳಬೇಕಾಗಿಲ್ಲ. ಅದಕ್ಕಾಗಿಯೇ ಜಿಪಿಎಸ್ ಇದೆ” ಎಂದರು ಎಂದು ಕ್ರಿಸ್ಸಿ ಸ್ಥಳೀಯ ಸುದ್ದಿವಾಹಿನಿಗೆ ತಿಳಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಚಾಲಕಿ “ಈಗಲೇ ನನ್ನ ವಾಹನದಿಂದ ಇಳಿಯಿರಿ ! ನಿಮ್ಮ ರೈಡ್ ಮುಗಿದಿದೆ. ಹೊರಗೆ ಹೋಗಿ!” ಎಂದು ಕೂಗುತ್ತಿರುವುದು ಕೇಳಿಸುತ್ತದೆ. ಕೆಲವೇ ಸೆಕೆಂಡ್‌ಗಳ ನಂತರ, ಕ್ರಿಸ್ಸಿ ಚಾಲಕಿಯ “ಹುಚ್ಚು ಕಣ್ಣುಗಳು” ಎಂದು ಹೇಳಿದಾಗ, ಆ ಮಹಿಳೆ ಏಕಾಏಕಿ ಬಂದೂಕನ್ನು ತೆಗೆದು ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಪ್ರಯಾಣಿಕರ ಕಡೆಗೆ ಗುರಿಯಿಟ್ಟಿದ್ದಾರೆ.
“ನಾನು ಈ ರೀತಿಯ ಘಟನೆ ನಡೆಯುತ್ತದೆ ಎಂದು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಎಲ್ಲವೂ ಕ್ಷಣಾರ್ಧದಲ್ಲಿ ನಡೆಯಿತು. ನನ್ನ ಗಮನವೆಲ್ಲಾ ಬಂದೂಕಿನ ಮೇಲಿತ್ತು” ಎಂದು ಕ್ರಿಸ್ಸಿ ಆಘಾತ ವ್ಯಕ್ತಪಡಿಸಿದ್ದಾರೆ.
ಇದೀಗ ಕ್ರಿಸ್ಸಿ ಸೆಲೆಸ್ ಹಾಗೂ ಆಕೆಯ ಸ್ನೇಹಿತೆ ಉಬರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ. ಅವರ ವಕೀಲರಾದ ಕಾರ್ಲೋಸ್ ಡೊಮಿಂಗೇಜ್ ಈ ಘಟನೆಯನ್ನು “ಮಾರಣಾಂತಿಕ ಆಯುಧದಿಂದ ಗಂಭೀರ ಹಲ್ಲೆ” ಎಂದು ಬಣ್ಣಿಸಿದ್ದಾರೆ ಮತ್ತು ಚಾಲಕಿಯ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
“ನಿಮ್ಮ ಮೇಲೆ ನೇರವಾಗಿ ಬಂದೂಕು ಗುರಿಯಿಟ್ಟಿರುವುದನ್ನು ಪ್ರತ್ಯಕ್ಷವಾಗಿ ನೋಡುವುದು ಆಘಾತಕಾರಿ. ಒಂದು ಸಣ್ಣ ಭಿನ್ನಾಭಿಪ್ರಾಯವು ಬಂದೂಕಿನ ಬೆದರಿಕೆಯನ್ನು ಸಮರ್ಥಿಸುವುದಿಲ್ಲ” ಎಂದು ಡೊಮಿಂಗೇಜ್ ಹೇಳಿದ್ದಾರೆ.
ವರದಿಗಳ ಪ್ರಕಾರ, ಉಬರ್ ಸಂಸ್ಥೆಯು ಈ ಘಟನೆಯನ್ನು “ಅತ್ಯಂತ ಗಂಭೀರವಾದದ್ದು” ಎಂದು ಪರಿಗಣಿಸಿದ್ದು, ಆಂತರಿಕ ತನಿಖೆ ನಡೆಸುವವರೆಗೆ ಚಾಲಕಿಯನ್ನು ವೇದಿಕೆಯಿಂದ ತೆಗೆದುಹಾಕಿದೆ ಎಂದು ಖಚಿತಪಡಿಸಿದೆ. ಚಾಲಕರು ಬಂದೂಕುಗಳನ್ನು ಕೊಂಡೊಯ್ಯುವುದನ್ನು ತಮ್ಮ ನೀತಿಗಳು ಅನುಮತಿಸುವುದಿಲ್ಲ ಎಂದು ಕಂಪನಿಯು ಸ್ಪಷ್ಟಪಡಿಸಿದೆ.