ಕೊಪ್ಪಳ: ಖರ್ಚಿಗೆ 100 ರೂಪಾಯಿಗೆ ಕೊಡದಿದ್ದಕ್ಕೆ ಅಜ್ಜಿ ತಲೆಯ ಮೇಲೆ ಮೊಮ್ಮಗ ರುಬ್ಬುವ ಗುಂಡು ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿಯಲ್ಲಿ ಶುಕ್ರವಾರ ನಡೆದಿದೆ.
ಕನಕಮ್ಮ ನಾಗಪ್ಪ ಬೊಕ್ಕಸದ(82) ಮೃತಪಟ್ಟವರು. ಮೊಮ್ಮಗ ಚೇತನ್ ಕುಮಾರ್(34) ಕೊಲೆ ಆರೋಪಿಯಾಗಿದ್ದಾನೆ. ಶುಕ್ರವಾರ ಬೆಳಗ್ಗೆ ಹಣಕ್ಕಾಗಿ ತಂದೆ, ತಾಯಿ, ಅಜ್ಜಿಯನ್ನು ಚೇತನ್ ಕುಮಾರ್ ಪೀಡಿಸಿದ್ದ. ಹಣಕ್ಕಾಗಿ ಅಜ್ಜಿ ಕನಕಮ್ಮನ ಕೈ ಕಾಲು ಹಿಡಿದಿದ್ದನಾದರೂ ಅವರು ಹಣ ಕೊಟ್ಟಿಲ್ಲ. ಇದರಿಂದ ರೊಚ್ಚಿಗೆದ್ದ ಚೇತನ ಅಜ್ಜಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ತೀವ್ರ ರಕ್ತಸ್ರಾವದಿಂದ ಮನೆಯಲ್ಲಿಯೇ ಕನಕಮ್ಮ ಮೃತಪಟ್ಟಿದ್ದಾರೆ. ಕನಕಗಿರಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.