ಬೆಂಗಳೂರು: ಕನ್ನಡ ಹಾಡುಗಳನ್ನು ಹಾಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದಕ್ಕೆ ಕನ್ನಡಾಭಿಮಾನವನ್ನು ಪಹಲ್ಗಾಮ್ ದಾಳಿ ಘಟನೆಗೆ ಹೋಲಿಸಿ ವಿವಾದಕ್ಕೀಡಾಗಿದ್ದ ಗಾಯಕ ಸೋನು ನಿಗಮ್ ವಿರುದ್ಧ ಅಂತಿಮ ತನಿಖಾ ವರದಿ ಸಲ್ಲಿಕೆಗೆ ಹೈಕೋರ್ಟ್ ತಡೆ ನೀಡಿದೆ.
ಸೋನು ನಿಗಮ್ ವಿರುದ್ಧ ಧರ್ಮರಾಜ ಎಂಬುವವರು ದಾಖಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದನ್ನು ಪ್ರಶ್ನಿಸಿ ಹಾಗೂ ವಿಚಾರಣಾ ಪ್ರಕ್ರಿಯೆ ರದು ಕೋರಿ ಸೋನು ನಿಗಮ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿದಾರ ಸೋನು ನಿಗಮ್ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬಹುದು. ಇಲ್ಲವೇ ಗಾಯಕನ ವೆಚ್ಚದಲ್ಲಿ ತನಿಖಾಧಿಕಾರಿಗಳು ಅವರಿದ್ದ ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಬಹುದು ಎಂದು ತಿಳಿಸಿದೆ.
ಈಗಾಗಲೇ ಅರ್ಜಿದಾರರು ನೀಡಿರುವ ಹೇಳಿಕೆ ಸಾಮಜೈಕ ಮಾಧ್ಯಮಗಳಲ್ಲಿ ಗೊತ್ತಾಗಿದೆ. ಅವರವಿರುದ್ಧ ಯಾವ ತನಿಖೆ ನಡೆಸಬೇಕು? ಏನು ಮಹಜರು ನಡೆಸಬೇಕು ಎಂಬುದನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಳ್ಳಿ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಈ ನಿಟ್ಟಿನಲ್ಲಿ ಅಂತಿಮ ತನಿಖಾ ವರದಿ ಸಲ್ಲಿಕೆಗೆ ಹೈಕೋರ್ಟ್ ತಡೆ ನೀಡಿದೆ.