ಬೆಂಗಳೂರು: ಇಂದಿನಿಂದ ಮದ್ಯದ ದರ ಹೆಚ್ಚಳವಾಗಲಿದೆ. ಭಾರತೀಯ ಮದ್ಯಗಳ(IML) ಮತ್ತು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು(AED) ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಮೇ 15ರ ಗುರುವಾರದಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ಮದ್ಯದ ಮೇಲಿನ ಸುಂಕ ಪರಿಷ್ಕರಣೆ ಮತ್ತು ತೆರಿಗೆ ಸ್ಲ್ಯಾಬ್ ಗಳ ಬದಲಾವಣೆಗಾಗಿ ಆರ್ಥಿಕ ಇಲಾಖೆಯು ಕರ್ನಾಟಕ ಅಬಕಾರಿ(ಅಬಕಾರಿ ಸುಂಕ ಮತ್ತು ಶುಲ್ಕ) ಎರಡನೇ ತಿದ್ದುಪಡಿ ನಿಯಮಗಳು- 2025ರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಭಾರತೀಯ ಮದ್ಯಗಳ ತೆರಿಗೆ ಸ್ಲ್ಯಾಬ್ ಗಳನ್ನು ಪೂರ್ಣ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿದೆ. ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಳದಿಂದ ಕಡಿಮೆ ದರದಲ್ಲಿ ಸಿಗುತ್ತಿದ್ದ ಬ್ರ್ಯಾಂಡಿ, ವಿಸ್ಕಿ, ಜಿನ್, ರಮ್ ಗಳ ಬೆಲೆ ರಾಜ್ಯದಲ್ಲಿ ಇನ್ನು ಮತ್ತಷ್ಟು ದುಬಾರಿಯಾಗಲಿದೆ. 180 ಎಂಎಲ್ ಬಾಟಲಿ ಮತ್ತು ಸ್ಯಾಷೆಗಳ ಬೆಲೆಯಲ್ಲಿ ಗರಿಷ್ಠ 15 ರೂಪಾಯಿ ಏರಿಕೆಯಾಗಲಿದೆ.
ಈಗ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಭಾರತೀಯ ಮದ್ಯಗಳಲ್ಲಿ ಒಟ್ಟು 18 ತೆರಿಗೆ ಸ್ಲ್ಯಾಬ್ ಗಳಿವೆ. ಈ ಸ್ಲ್ಯಾಬ್ ಗಳನ್ನು 16ಕ್ಕೆ ಇಳಿಕೆ ಮಾಡಲಾಗಿದೆ. ಮೊದಲ 4 ಸ್ಲ್ಯಾಬ್ ಗಳ ಗರಿಷ್ಠ ಬೆಲೆಯನ್ನು ಪರಿಷ್ಕರಣೆ ಮಾಡಲಾಗಿದೆ.
ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಲಾಗಿದ್ದು, ಪ್ರೀಮಿಯಂ ಅಥವಾ ಇತರೆ ಬಿಯರ್ ಬ್ರ್ಯಾಂಡ್ ಗಳ ಬೆಲೆ ಉತ್ಪಾದನೆ ವೆಚ್ಚ ಆಧರಿಸಿ ಪ್ರತಿ ಬಾಟಲಿಗೆ ಸರಾಸರಿ 5ರಿಂದ 15 ರೂಪಾಯಿ ಏರಿಕೆಯಾಗಲಿದೆ. ಅಗ್ಗದ ಬಿಯರ್ ಗಳ ಬೆಲೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದ್ದು, 25 ರೂ. ವರೆಗೆ ಕಡಿಮೆಯಾಗಬಹುದು ಎಂದು ಹೇಳಲಾಗಿದೆ.