ಪಾಕಿಸ್ತಾನಕ್ಕೆ ಸಿಂಹಸ್ವಪ್ನವಾಗಿರುವ ಭಾರತದ ಬಲಿಷ್ಠ ಬ್ರಹ್ಮೋಸ್ ಕ್ಷಿಪಣಿಯು ಜಾಗತಿಕ ಮಟ್ಟದಲ್ಲಿ ಭಾರಿ ಆಸಕ್ತಿಯನ್ನು ಕೆರಳಿಸಿದೆ. ನ್ಯೂಸ್ 18 ಮತ್ತು ಇತರ ರಾಷ್ಟ್ರೀಯ ಮಾಧ್ಯಮಗಳ ವರದಿಗಳ ಪ್ರಕಾರ, ಬರೋಬ್ಬರಿ 17 ದೇಶಗಳು ಈ ಮಾರಕ ಅಸ್ತ್ರವನ್ನು ಖರೀದಿಸಲು ತಮ್ಮ ಉತ್ಸುಕತೆಯನ್ನು ವ್ಯಕ್ತಪಡಿಸಿವೆ. ಭಾರತ ಮತ್ತು ರಷ್ಯಾ ದೇಶಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್, ವಿಶ್ವದ ಅತ್ಯಂತ ವೇಗದ ಮತ್ತು ನಿಖರ ಗುರಿ ಸಾಧಿಸುವ ಕ್ರೂಸ್ ಕ್ಷಿಪಣಿ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.
ಪಹಲ್ಗಾಮ್‌ನಲ್ಲಿ 26 ಅಮಾಯಕ ಜೀವಗಳನ್ನು ಬಲಿ ತೆಗೆದ ಭಯೋತ್ಪಾದಕ ದಾಳಿಗೆ ಭಾರತವು ನಡೆಸಿದ ದಿಟ್ಟ ಸೇನಾ ಕಾರ್ಯಾಚರಣೆ ‘ಆಪರೇಷನ್ ಸಿಂಧೂರ್’ ನಂತರ, ಪಾಕಿಸ್ತಾನವು ಗಡಿಯಲ್ಲಿ ತನ್ನ ಎಂದಿನ ಚಿತಾವಣೆಯನ್ನು ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳ ಮೂಲಕ ಮುಂದುವರೆಸಿತ್ತು. ಆದರೆ, ತನ್ನ ನಿಖರತೆ ಹಾಗೂ ಭೀಕರ ವಿನಾಶಕಾರಿ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ಭಾರತದ ಬ್ರಹ್ಮೋಸ್ ಕ್ಷಿಪಣಿಯ ಭಯದಿಂದ ಪಾಕಿಸ್ತಾನವು ಗಡಿ ಸಂಘರ್ಷಗಳಿಂದ ಕಾಲು ಕಿತ್ತಿ ಹಿಮ್ಮೆಟ್ಟಿತು ಮತ್ತು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿತು. ಇದೀಗ ಹೊಸ ವರದಿಗಳ ಪ್ರಕಾರ, ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ನಂತರ ಭಾರತದ ಕ್ಷಿಪಣಿ ಸಾಮರ್ಥ್ಯವನ್ನು ಜಗತ್ತಿಗೆ ಸಾರಿ ಹೇಳಿದ ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿಸಲು 17 ರಾಷ್ಟ್ರಗಳು ತೀವ್ರ ಆಸಕ್ತಿಯನ್ನು ತೋರಿಸಿವೆ.
ಈಗಾಗಲೇ ಫಿಲಿಪ್ಪೀನ್ಸ್ ದೇಶವು ಭಾರತದೊಂದಿಗೆ ಬ್ರಹ್ಮೋಸ್ ಖರೀದಿಗೆ ಅಧಿಕೃತ ಒಪ್ಪಂದವನ್ನು ಮಾಡಿಕೊಂಡಿದೆ. 375 ಮಿಲಿಯನ್ ಡಾಲರ್‌ಗಳ ಈ ಒಪ್ಪಂದದ ಭಾಗವಾಗಿ ಭಾರತವು ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಪೂರೈಸಿದೆ. ಇದರ ಬೆನ್ನಲ್ಲೇ ಇಂಡೋನೇಷ್ಯಾ, ವಿಯೆಟ್ನಾಂ, ಮಲೇಷ್ಯಾ, ಥೈಲ್ಯಾಂಡ್, ಸಿಂಗಾಪುರ, ಬ್ರೂನಿ, ಬ್ರೆಜಿಲ್, ಚಿಲಿ, ಅರ್ಜೆಂಟೀನಾ, ವೆನೆಜುವೆಲಾ, ಈಜಿಪ್ಟ್, ದಕ್ಷಿಣ ಆಫ್ರಿಕಾ, ಬಲ್ಗೇರಿಯಾ ಮತ್ತು ಕೆಲವು ಮಧ್ಯಪ್ರಾಚ್ಯ ರಾಷ್ಟ್ರಗಳು ಸಹ ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿಸಲು ಮುಂದೆ ಬಂದಿವೆ.
ಪ್ರಸ್ತುತ ಬ್ರಹ್ಮೋಸ್ ಭಾರತದ ಅತ್ಯಂತ ವೇಗದ ಕ್ರೂಸ್ ಕ್ಷಿಪಣಿಯಾಗಿದೆ. ಭಾರತವು ಮೊದಲ ಬಾರಿಗೆ ಜೂನ್ 12, 2001 ರಂದು ಈ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಅಂದಿನಿಂದ ಈ ಕ್ಷಿಪಣಿ ತಂತ್ರಜ್ಞಾನವು ಅನೇಕ ಸುಧಾರಣೆಗಳನ್ನು ಕಂಡಿದೆ. ಬ್ರಹ್ಮೋಸ್ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ರಷ್ಯಾದ ಒಕ್ಕೂಟದ ಎನ್‌ಪಿಒ ಮಶಿನೋಸ್ಟ್ರೋಯೇನಿಯಾ ಅವರ ಜಂಟಿ ಸಹಭಾಗಿತ್ವದ ಫಲಿತಾಂಶವಾಗಿದೆ. ಸೂಪರ್‌ಸಾನಿಕ್ ಕ್ಷಿಪಣಿಯಾಗಿರುವ ಬ್ರಹ್ಮೋಸ್, ಮ್ಯಾಕ್ 3 ವರೆಗಿನ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. 200-300 ಕೆಜಿ ತೂಕದ ಸಿಡಿತಲೆಯನ್ನು ಹೊತ್ತೊಯ್ಯುವ ಈ ಕ್ಷಿಪಣಿಯು 800 ಕಿಮೀ ವರೆಗಿನ ಗುರಿಯನ್ನು ಮುಟ್ಟಬಲ್ಲದು, ಅಂದರೆ ಪಾಕಿಸ್ತಾನದ ಹಲವಾರು ಪ್ರಮುಖ ನಗರಗಳನ್ನು ತನ್ನ ವ್ಯಾಪ್ತಿಯೊಳಗೆ ತರಬಲ್ಲದು.
ವೇಗದ ಜೊತೆಗೆ ನಿಖರತೆಯು ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳ ಪ್ರಮುಖ ಲಕ್ಷಣವಾಗಿದೆ. ಇದು ನೆಲ ಮಟ್ಟದಿಂದ ಕೇವಲ 10 ಮೀಟರ್ ಎತ್ತರದಲ್ಲಿರುವ ಗುರಿಗಳನ್ನು ಸಹ ಧ್ವಂಸಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಶತ್ರುಗಳ ರಾಡಾರ್‌ಗಳಿಂದ ಪತ್ತೆಯಾಗದ ಕಾರಣ, ಬ್ರಹ್ಮೋಸ್ ಸುಲಭವಾಗಿ ತನ್ನ ಗುರಿಯನ್ನು ತಲುಪಿ ಭಾರೀ ಹಾನಿಯನ್ನುಂಟುಮಾಡಬಲ್ಲದು. ಮ್ಯಾಕ್ 2.8 ಮತ್ತು ಮ್ಯಾಕ್ 3.5 ರ ನಡುವಿನ ವೇಗದಲ್ಲಿ ಚಲಿಸುವ ಬ್ರಹ್ಮೋಸ್, ಸಾಂಪ್ರದಾಯಿಕ ಸಬ್‌ಸಾನಿಕ್ ಕ್ರೂಸ್ ಕ್ಷಿಪಣಿಗಳಿಗಿಂತ ಸುಮಾರು ಮೂರು ಪಟ್ಟು ವೇಗದಲ್ಲಿ ಶತ್ರು ದೇಶಗಳ ರಕ್ಷಣಾ ವ್ಯವಸ್ಥೆಗಳನ್ನು ಅಪ್ಪಳಿಸುತ್ತದೆ.