ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದ ನಾದಿರ್ ಗ್ರಾಮದಲ್ಲಿ ಗುರುವಾರ ಮುಂಜಾನೆ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.
48 ಗಂಟೆಗಳ ಒಳಗೆ ಈ ಪ್ರದೇಶದಲ್ಲಿ ನಡೆದ ಎರಡನೇ ಎನ್ಕೌಂಟರ್ ಇದಾಗಿದೆ. ಜೈಶ್-ಎ-ಮೊಹಮ್ಮದ್ಗೆ ಸೇರಿದ ಓರ್ವ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಶೋಪಿಯಾನ್ ಜಿಲ್ಲೆಯ ಕೆಲ್ಲರ್ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಮೂವರು ಲಷ್ಕರ್-ಎ-ತೈಬಾ ಭಯೋತ್ಪಾದಕರನ್ನು ಹೊಡೆದುರುಳಿಸಿದ ಎರಡು ದಿನಗಳ ನಂತರ ಈ ಎನ್ ಕೌಂಟರ್ ನಡೆದಿದೆ.
ಮಂಗಳವಾರ ಕೊಲ್ಲಲ್ಪಟ್ಟ ಮೂವರು ಭಯೋತ್ಪಾದಕರಲ್ಲಿ, ಹತ್ಯೆಗೀಡಾದ ಇಬ್ಬರು ಭಯೋತ್ಪಾದಕರನ್ನು ಶಾಹಿದ್ ಕುಟ್ಟಯ್ ಮತ್ತು ಅದ್ನಾನ್ ಶಫಿ ಎಂದು ಗುರುತಿಸಲಾಗಿದೆ, ಇಬ್ಬರೂ ಶೋಪಿಯಾನ್ ನಿವಾಸಿಗಳು. 2023 ರಲ್ಲಿ ಲಷ್ಕರ್ಗೆ ಸೇರಿದ ಕುಟ್ಟಯ್, ಕಳೆದ ವರ್ಷ ಏಪ್ರಿಲ್ 8 ರಂದು ಡ್ಯಾನಿಶ್ ರೆಸಾರ್ಟ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ, ಇದರಲ್ಲಿ ಇಬ್ಬರು ಜರ್ಮನ್ ಪ್ರವಾಸಿಗರು ಮತ್ತು ಒಬ್ಬ ಚಾಲಕ ಗಾಯಗೊಂಡಿದ್ದರು. ಕಳೆದ ವರ್ಷ ಮೇ ತಿಂಗಳಲ್ಲಿ ಶೋಪಿಯಾನ್ನ ಹೀರ್ಪೋರಾದಲ್ಲಿ ಬಿಜೆಪಿ ಸರಪಂಚರೊಬ್ಬರ ಹತ್ಯೆಯಲ್ಲೂ ಈತ ಭಾಗಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.