ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಭದ್ರಾ ನಾಲೆಯಲ್ಲಿ ಸಿಲುಕಿ, ಪ್ರಾಣ ರಕ್ಷಣೆಗಾಗಿ ಪರದಾಡುತ್ತಿದ್ದ ಮರಿ ಜಿಂಕೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ಭದ್ರಾವತಿ ತಾಲೂಕಿನ ಅಶೋಕ ನಗರದ ಬಳಿ ಜಿಂಕೆ ಮರಿ ನೀರು ಕುಡಿಯಲು ಭದ್ರಾ ನಾಲೆಗೆ ಇಳಿದಿದೆ. ಈ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದಿದೆ. ಇದನ್ನು ಕಂಡು ಸ್ಥಳೀಯರು ಪೊಲಿಸರಿಗೆ ಮಾಹಿತಿ ನೀಡಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ನೀರಿಗಿಳಿದು ಜಿಂಕೆಯನ್ನು ರಕ್ಷಿಸಿದ್ದಾರೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿಗಳು ಮರಿ ಜಿಂಕೆಯನ್ನು ಮಾವಿನಕೆರೆ ವಿಭಾಗದ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.