ಬೆಳಗಾವಿ: ಕರ್ನಲ್ ಸೋಫಿಯಾ ಖುರೇಷಿ ಮನೆ ಮೇಲೆ ಆರ್.ಎಸ್.ಎಸ್ ದಾಳಿ ನಡೆಸಿದೆ ಎಂದು ಕಿಡಿಗೇಡಿಯೊಬ್ಬ ಸಾಮಾಜಿಕ ಜಾಲತಾಣಾಗಳಲ್ಲಿ ಪೋಸ್ಟ್ ಮಾಡಿದ್ದು, ಪೊಲೀಸರು ಈ ಬಗ್ಗೆ ಪರಿಶೀಲನೆಗೆ ಮುಂದಾಗುತ್ತಿದ್ದಂತೆ ಸಾಮಾಜಿಕ ಜಲತಾಣಗಳಿಂದ ಪೋಸ್ಟ್ ಡಿಲಿಟ್ ಮಾಡಿದ್ದಾನೆ.
ಕರ್ನಲ್ ಸೋಫಿಯಾ ಖುರೇಷಿ ಅವರ ಪತಿ ಕರ್ನಲ್ ತಾಜುದ್ದೀನ್ ಅವರ ಬೆಳಗಾವಿಯ ಗೋಕಾಕ್ ತಾಲೂಕಿನ ಕೊಣ್ಣೂರಿನ ಗ್ರಾಮದ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ತಕ್ಷಣ ಅಲರ್ಟ್ ಆದ ಪೊಲೀಸರು ತಾಜುದ್ದೀನ್ ನಿವಾಸಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಸಲಿಗೆ ಯಾವುದೇ ದಾಳಿ ನಡೆದಿಲ್ಲ ಎಂಬುದು ಖಚಿತವಾಗಿದೆ.
ಈ ಬಗ್ಗೆ ಬೆಳಗಾವಿ ಎಸ್ ಪಿ ಭೀಮಾ ಶಂಕರ್ ಗುಳೇದ್ ಮಾಹಿತಿ ನೀಡಿದ್ದು, ಟ್ವಿಟರ್ ಖಾತೆಯಲ್ಲಿ ಅನಿಸ್ ಉದ್ದೀನ್ ಎಂಬಾತ ತಾಜುದ್ದೀನ್ ಅವರ ಮನೆ ಮೇಲೆ ಆರ್.ಎಸ್.ಎಸ್ ಅಟ್ಯಾಕ್ ಎಂದು ಯಾವುದೋ ಮನೆಯ ಧ್ವಂಸದ ಹಳೇ ಫೋಟೋ ಪೋಸ್ಟ್ ಮಾಡಿದ್ದ.ಪೋಸ್ಟ್ ವಿಚಾರ ತಿಳಿದು ಸೋಫಿಯಾ ಅವರ ಪತಿಯ ಮನೆಗೆ ತೆರಳಿ ಪೊಲೀಸರು ಪರಿಶೀಲಿಸಿದ್ದಾರೆ. ಮನೆ ಮೇಲೆ ಯಾವುದೇ ದಾಳಿಯಾಗಿಲ್ಲ ಎಂದು ತಿಳಿಸಿದರು.
ಸುರಕ್ಷತಾ ಕ್ರಮವಾಗಿ ಸೋಫಿಯಾ ಪತಿ ಮನೆಗೆ ಗೋಕಾಕ್ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಪೊಲೀಸರ್ ಗಮನಕ್ಕೆ ಬರುತ್ತಿದ್ದಂತೆ ಕಿಡಿಗೇಡಿ ಪೋಸ್ಟ್ ಡಿಲಿಟ್ ಮಾಡಿದ್ದಾನೆ. ಇದೊಂದು ಸುಳ್ಲು ಸುದ್ದಿಯಾಗಿದ್ದು, ಯಾರೂ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ.