ದಾವಣಗೆರೆ : ರಾಷ್ಟ್ರೀಯ ಹಾಗೂ ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ ಜನರ ಆಸ್ತಿ, ಪಾಸ್ತಿ ನಷ್ಟ ತಡೆಗಟ್ಟಲು ಹಾಗೂ ರಕ್ಷಣೆಗೆ ಅನುಕೂಲವಾಗುವಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತುರ್ತು ಸಂದರ್ಭದಲ್ಲಿ ಸಂವಹನಕ್ಕಾಗಿ ಸೈರನ್ಗಳನ್ನು ಅಳವಡಿಸಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ ನೀಡಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಯ ತುರ್ತು ಪರಿಸ್ಥಿತಿ ಮತ್ತು ಪ್ರಕೃತಿ ವಿಪತ್ತುಗಳಿಂದ ಉಂಟಾಗುವ ಸಂದರ್ಭವನ್ನು ನಿಭಾಯಿಸಲು ಮತ್ತು ಈ ವೇಳೆ ತುರ್ತಾಗಿ ಜನರಿಗೆ ಮಾಹಿತಿ ತಲುಪಿಸುವ ಉದ್ದೇಶದಿಂದ ಹಾಗೂ ಜಾಗೃತರಾಗಿರಲು ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಮೂರುಕಡೆ ಸೈರನ್ ಅಳವಡಿಸಬೇಕು. ಈ ಸೈರನ್ಗಳನ್ನು ಕನಿಷ್ಠ 50 ಕಿ.ಮೀ ಅಂತರದಲ್ಲಿರುವಂತೆ ನೋಡಿಕೊಳ್ಳಬೇಕೆಂದರು.
ತುರ್ತು ಸಂದರ್ಭದಲ್ಲಿ ಜನರು ಗಾಬರಿಯಾಗಂತೆ ಮತ್ತು ರಕ್ಷಣೆ ಪಡೆಯಲು ಸಲಹೆ ಮತ್ತು ಮುಂಜಾಗ್ರತಾ ಕ್ರಮಗಳ ಸೂಚನೆ ನೀಡಬೇಕು. ವಿಕೋಪದಲ್ಲಿ ಸಿಲುಕಿದಾಗ ರಕ್ಷಣಾತ್ಮಕ ಕ್ರಮಗಳ ಜೊತೆಗೆ ಜೀವಹಾನಿಯನ್ನು ತಡೆಗಟ್ಟಲು ಸನ್ನದ್ದವಾಗಿರಬೇಕು. ಇದಕ್ಕಾಗಿ ಆಸ್ಪತ್ರೆಯಲ್ಲಿನ ತುರ್ತು ನಿಗಾಘಟಕ, ವೈದ್ಯರ ತಂಡ, ರಕ್ಷಣಾತ್ಮಕ ಕ್ರಮಗಳ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ ಕೈಗೊಳ್ಳುವ ನಿಟ್ಟಿನಲ್ಲಿ 24/7 ಸಿದ್ದರಾಗಿರುವಂತೆ ತಂಡಗಳನ್ನು ರಚನೆ ಮಾಡಿಕೊಳ್ಳಬೇಕೆಂದು ತಿಳಿಸಿ ಈ ನಿಟ್ಟಿನಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಯೋಜನೆ ತಯಾರಿಸಲು ಸೂಚನೆ ನೀಡಿದರು.
ದಾಮಿನಿ ಆಪ್ ಡೌನ್ಲೊಡ್ ಮಾಡಿ; ಪೂರ್ವ ಮುಂಗಾರು ಸಂದರ್ಭದಲ್ಲಿ ಸಿಡಿಲು ಬಡಿದು ಜನರು ಮತ್ತು ಜಾನುವಾರುಗಳು ಅಸುನೀಗುವುದನ್ನು ಕಾಣಲಾಗುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ಸಿಡಿಲಿನ ಮುನ್ನೆಚ್ಚರಿಕೆ ಮಾಹಿತಿ ತಿಳಿದುಕೊಳ್ಳಲು ಮೊಬೈಲ್ನಲ್ಲಿ ಪ್ಲೇಸ್ಟೋರ್ನಿಂದ ಕೇಂದ್ರ ಸರ್ಕಾರದ ದಾಮಿನಿ ಆಫ್ ಡೌನ್ಲೋಡ್ ಮಾಡಿಕೊಂಡಲ್ಲಿ, ಅದು ಮಳೆ ಬರುವಾಗ ತಮ್ಮ ಸುತ್ತಮುತ್ತಲಿನಲ್ಲಿ ಸಿಡಿಲು ಅಪ್ಪಳಿಸುವ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಲಿದೆ. ಇದರಿಂದ ಕುರಿಗಾಯಿಗಳು ಜಾನುವಾರುಗಳ ರಕ್ಷಣೆ ಮತ್ತು ಜೀವ ರಕ್ಷಣೆ ಪಡೆದುಕೊಳ್ಳಬಹುದಾಗಿದೆ ಎಂದರು.
ಮುಂಗಾರು ಅನಾಹುತ ತಡೆಗೆ ಸಿದ್ದರಾಗಿ; ಜೂನ್ನಿಂದ ಮುಂಗಾರು ಆರಂಭವಾಗಲಿದೆ ಮತ್ತು ಶಾಲಾ, ಕಾಲೇಜುಗಳು ಆರಂಭವಾಗಲಿವೆ. ಸಿಥಿಲವಾಗಿರುವ ಶಾಲಾ ಕೊಠಡಿಗಳ ದುರಸ್ಥಿಯನ್ನು ತಕ್ಷಣವೇ ಕೈಗೊಂಡು ರಿಪೇರಿ ಮಾಡಿಸಬೇಕು. ಮತ್ತು ತುಂಬಾ ಸಿಥಿಲವಾಗಿರುವ ಕೊಠಡಿಗಳನ್ನು ಗುರುತಿಸಿ ರಿಪೇರಿಗೆ ಕ್ರಿಯಾಯೋಜನೆ ತಯಾರಿಸಿ ನೀಡಲು ಉಪನಿರ್ದೇಶಕರಿಗೆ ತಿಳಿಸಿ ಎಲ್ಲಾ ಶಾಲೆಗಳ ಸ್ಥಿತಿಗತಿ ಹಾಗೂ ಸುಸ್ಥಿತಿ ಬಗ್ಗೆ ಆಡಿಟ್ ವರದಿ ಪರಿಶೀಲಿಸಿ ನೀಡಲು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದವರಿಗೆ ಸೂಚನೆ ನೀಡಿದರು.
ಕೆರೆ, ಕಟ್ಟೆಗಳ ಪರಿಶೀಲನೆ ನಡೆಸಿ; ಜಿಲ್ಲೆಯಲ್ಲಿನ ಕೆರೆಗಳು ಮತ್ತು ಚೆಕ್ಡ್ಯಾಂಗಳ ಸುಸ್ಥಿತಿ ಬಗ್ಗೆ ಮತ್ತು ರಸ್ತೆ, ಕಾಲುವೆಗಳಲ್ಲಿನ ಕಿರು ಸೇತುವೆಗಳ ಪರಿಶೀಲನೆ ನಡೆಸಿ ಆಯಾ ಇಲಾಖೆಯವರು ವರದಿ ನೀಡಬೇಕು. ಮಳೆಗಾಲದಲ್ಲಿ ಸೇತುವೆ ದುಸ್ಥಿಯಾಗಿದ್ದಲ್ಲಿ ನೀರಿನಿಂದ ಇದು ಕಾಣದೆ, ಇದರಲ್ಲಿ ಜಾರಿ ಹೋಗುವ ಸಂಭವವಿರುತ್ತದೆ. ಆದ್ದರಿಂದ ಸೇತುವೆ, ಕೆರೆಯ ಏರಿ ಸುಭದ್ರತೆ ಪರಿಶೀಲನೆ ನಡೆಸಲು ಸೂಚನೆ ನೀಡಿದರು. ಇದೇ ವೇಳೆ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಅವರು ಕೊಡಗನೂರು ಕೆರೆ ಏರಿಯ ದುರಸ್ಥಿ ಕೆಲಸ ನಡೆಯುತ್ತಿದ್ದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್, ಅಭಿಷೇಕ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.