ಕಾರವಾರ: ಆಸ್ತಿ ವಿಷಯಕ್ಕೆ ಮಗಳ ಪತಿಯ ಮನೆಯ ನಾಲ್ವರನ್ನು ಹತ್ಯೆಗೈದ ತಂದೆಗೆ ಜೀವಾವಧಿ ಶಿಕ್ಷೆ, ಮಗನಿಗೆ ಗಲ್ಲು ಶಿಕ್ಷೆ ವಿಧಿಸಿ ಉತ್ತರ ಕನ್ನಡ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.
ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕು ಹಲ್ಯಾಣಿಯ ವಿನಯ್ ಭಟ್ಟ(40) ಎಂಬಾತನಿಗೆ ಮರಣದಂಡನೆ ಶಿಕ್ಷೆ ನೀಡಲಾಗಿದ್ದು, ಆತನ ತಂದೆ ಶ್ರೀಧರ ಭಟ್ಟನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
2023ರ ಫೆಬ್ರವರಿ 24 ರಂದು ಭಟ್ಕಳ ತಾಲೂಕಿನ ಓಣಿಬಾಗಿಲು ಗ್ರಾಮದ ಕೃಷಿಕ ಶಂಭುಭಟ್ಟ(700, ಅವರ ಪತ್ನಿ ಮಾದೇವಿ(60), ಪುತ್ರ ರಾಘವೇಂದ್ರ ಯಾನೆ ರಾಜು ಭಟ್(40) ಸೊಸೆ ಕುಸುಮಾ(35) ಅವರನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಲಾಗಿತ್ತು. ಹತ್ಯೆಯಾದ ಶಂಭು ಭಟ್ಟ ಮತ್ತು ಅಪರಾಧಿ ಶ್ರೀಧರ ಭಟ್ಟ ಬೀಗರಾಗಿದ್ದರು. ಅಪರಾಧಿಯ ಪುತ್ರಿ ವಿದ್ಯಾ ಭಟ್ಟ ಪಾಲಿನ ಆಸ್ತಿ ಕಲಹದಿಂದಾಗಿ ನಾಲ್ವರ ಹತ್ಯೆ ನಡೆದಿರುವುದು ಸಾಬೀತಾಗಿದೆ.
ಶಂಭು ಭಟ್ಟ, ಅವರ ಪುತ್ರ ರಾಜು ಮತ್ತು ಸೊಸೆ ಕುಸುಮಾ ಅವರನ್ನು ಹತ್ಯೆ ಮಾಡಿದ ವಿನಯ್ ಭಟ್ಟನಿಗೆ ಮರಣದಂಡನೆ ಶಿಕ್ಷೆ, ಮಾದೇವಿ ಅವರನ್ನು ಹತ್ಯೆ ಮಾಡಿದ ಶ್ರೀಧರಭಟ್ಟನಿಗೆ ಜೀವಾವಧಿ ಶಿಕ್ಷೆ ಹಾಗೂ 2.10 ಲಕ್ಷ ರೂ. ದಂಡ ವಿಧಿಸಲಾಗಿದೆ.
ಹತ್ಯೆ ನಡೆದ ದಿನ ಮನೆಯೊಳಗೆ ಮಲಗಿದ್ದ ಸಣ್ಣ ಮಗು ಮತ್ತು ಪಕ್ಕದ ಮನೆಗೆ ಆಟವಾಡಲು ಹೋಗಿದ್ದ ಇನ್ನೊಬ್ಬ ಮಗ ಪಾರಾಗಿದ್ದರು. ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಡಿ.ಎಸ್. ವಿಜಯಕುಮಾರ್ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸರ್ಕಾರಿ ಅಭಿಯೋಜಕರಾದ ತನುಜಾ ಬಿ. ಹೊಸಪಟ್ಟಣ ಅವರು ವಾದ ಮಂಡಿಸಿದ್ದರು.