ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಯಶವಂತನಗರ ಗ್ರಾಮದಲ್ಲಿ ಹೂತಿದ್ದ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ತಿಪ್ಪೇಸ್ವಾಮಿ(28) ಮೃತಪಟ್ಟ ಯುವಕ. ಆತನ ಸಾವಿನ ಬಗ್ಗೆ ಅವರ ತಾಯಿ ಸುಧಾ ಸಂಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದು, ನನ್ನ ಮಗ ತಿಪ್ಪೇಸ್ವಾಮಿಗೆ ಯಾರೋ ವಿಷ ಹಾಕಿ ಕೊಂದಿದ್ದಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಹೂತಿದ್ದ ಶವ ಹೊರ ತೆಗೆದು ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ತಹಶೀಲ್ದಾರ್ ಜಿ. ಅನಿಲ್ ಕುಮಾರ್, ಬಳ್ಳಾರಿ ವಿಮ್ಸ್ ವೈದ್ಯಾಧಿಕಾರಿ ಡಾ. ರವಿಶಂಕರ್ ನೇತೃತ್ವದ ತಂಡ ಮತ್ತು ಪೊಲೀಸರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಮತ್ತೆ ಹೂಳಲಾಗಿದೆ.
ಈ ಕುರಿತಾಗಿ ಮಾಹಿತಿ ನೀಡಿದ ತಹಶೀಲ್ದಾರ್ ಅನಿಲ್ ಕುಮಾರ್ ಅವರು, ತಿಪ್ಪೇಸ್ವಾಮಿ ಸಾವಿನ ಕುರಿತಾಗಿ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದೇಹದ ಕೆಲವು ಭಾಗಗಳನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಯ ಬಳಿಕ ಸತ್ಯಾಂಶ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ಕಳೆದ ಬುಧವಾರ ರಾತ್ರಿ ಪಾರ್ಟಿಗೆ ಹೋಗಿದ್ದ ತಿಪ್ಪೇಸ್ವಾಮಿ ಮರುದಿನ ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದ. ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಪಾರ್ಟಿಯಲ್ಲಿ ತಿಪ್ಪೇಸ್ವಾಮಿ ಏನಾದರೂ ಕುಡಿಸಿರಬಹುದು ಎಂಬುದು ಪೋಷಕರ ಅನುಮಾನವಾಗಿದೆ. ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.