ತುಮಕೂರು: ಆಸ್ತಿ ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆಯಲ್ಲೇ ಪಿಡಿಒ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಧುಗಿರಿ ತಾಲೂಕು ಪುರವರ ಹೋಬಳಿ ಕೋಡ್ಲಾಪುರ ಗ್ರಾಮ ಪಂಚಾಯಿತಿ ಪಿಡಿಒ ಪುಂಡಲಿಕ ಬೊಮ್ಮಗೊಂಡ ಲೋಕಾಯುಕ್ತ ಬಲೆಗೆ ಬಿದ್ದವರು.
ವೀರನಾಗೇನಹಳ್ಳಿಯ ಆನಂದ್ ಅವರು ಮನೆಯ ಇ- ಖಾತೆಗಾಗಿ ಅರ್ಜಿ ಸಲ್ಲಿಸಿದ್ದು, ಖಾತೆ ಮಾಡಿಕೊಡಲು ಪಿಡಿಒ ಪುಂಡಲೀಕ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅವರಿಗೆ ಮಂಗಳವಾರ 6,000 ರೂ. ನೀಡುವಾಗ ಲೋಕಾಯುಕ್ತ ಎಸ್ಪಿ ಲಕ್ಷ್ಮಿನಾರಾಯಣ್ ನೇತೃತ್ವದ ತಂಡ ದಾಳಿ ಮಾಡಿದೆ.
ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಲಂಚ ಪಡೆಯುವಾಗ ದಾಳಿ ಮಾಡಿ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ. ದಾಳಿಯಲ್ಲಿ ಡಿವೈಎಸ್ಪಿ ಸಂತೋಷ್, ಇನ್ ಸ್ಪೆಕ್ಟರ್ ಶಿವರುದ್ರಪ್ಪ ಮೇಟಿ, ರಾಜು, ಹಾಗೂ ಮಹಮದ್ ಸಲೀಂ, ಸುರೇಶ್ ಭಾಗವಹಿಸಿದ್ದರು.