ಕೇಂದ್ರ ಸರ್ಕಾರಿ ನೌಕರರೇ ಗಮನಿಸಿ: CGHS ಪಾವತಿ ನಿಯಮಗಳಲ್ಲಾಗಿದೆ ಈ ಬದಲಾವಣೆ !

ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆಯ (ಸಿಜಿಎಚ್‌ಎಸ್) ಫಲಾನುಭವಿಗಳಿಗೆ ಸಿಹಿ ಸುದ್ದಿ ಮತ್ತು ಎಚ್ಚರಿಕೆಯ ಕರೆ ಗಂಟೆ ! ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಿಜಿಎಚ್‌ಎಸ್ ಪಾವತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ. ಇನ್ನು ಮುಂದೆ, ಸಿಜಿಎಚ್‌ಎಸ್ ಚಂದಾದಾರಿಕೆ ಪಾವತಿಗಳನ್ನು ಕೇವಲ ಅಧಿಕೃತ ಸಿಜಿಎಚ್‌ಎಸ್ ವೆಬ್‌ಸೈಟ್ (www.cghs.mohfw.gov.in) ಮೂಲಕ ಮಾತ್ರ ಮಾಡಬೇಕಾಗುತ್ತದೆ. ಈ ಹೊಸ ನಿಯಮವು ಇದೇ ತಿಂಗಳ ಏಪ್ರಿಲ್ 28, 2025 ರಿಂದಲೇ ಜಾರಿಗೆ ಬಂದಿದೆ.

ಈ ಹಿಂದೆ, ಪಿಂಚಣಿದಾರರು ಸಿಜಿಎಚ್‌ಎಸ್ ಕಾರ್ಡ್ ನವೀಕರಣ ಮತ್ತು ಹೊಸ ಅರ್ಜಿಗಳಿಗಾಗಿ ಭಾರತ್‌ಕೋಶ್ ಪೋರ್ಟಲ್ (www.bharatkosh.gov.in) ಅನ್ನು ಬಳಸುತ್ತಿದ್ದರು. ಆದರೆ, ಏಪ್ರಿಲ್ 28 ರಿಂದ ಈ ಹಳೆಯ ಪದ್ಧತಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಒಂದು ವೇಳೆ, ಹಳೆಯ ವಿಧಾನದ ಮೂಲಕ ಏಪ್ರಿಲ್ 27 ರೊಳಗೆ ಪಾವತಿ ಮಾಡದಿದ್ದರೆ, ಅಂತಹ ಅರ್ಜಿಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಹೀಗಾಗಿ, ಬಾಕಿ ಇರುವ ಪಾವತಿಗಳನ್ನು ತಕ್ಷಣವೇ ಹೊಸ ಪೋರ್ಟಲ್ ಮೂಲಕ ಪೂರ್ಣಗೊಳಿಸುವುದು ಅತ್ಯಗತ್ಯ.

ಈ ಬದಲಾವಣೆಯ ಮುಖ್ಯ ಉದ್ದೇಶವೆಂದರೆ, ಸಿಜಿಎಚ್‌ಎಸ್ ಸೇವೆಗಳನ್ನು ಹೆಚ್ಚು ಸುಲಭ, ಪಾರದರ್ಶಕ ಮತ್ತು ತಂತ್ರಜ್ಞಾನ ಸ್ನೇಹಿಯನ್ನಾಗಿಸುವುದು. ಇದರ ಭಾಗವಾಗಿ, 2005 ರಿಂದ ಇದ್ದ ಹಳೆಯ ಮತ್ತು ತಾಂತ್ರಿಕವಾಗಿ ಹಿಂದುಳಿದಿದ್ದ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಸಿ-ಡಿಎಸಿ ಅಭಿವೃದ್ಧಿಪಡಿಸಿದ ನೂತನ ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ (ಎಚ್‌ಎಂಐಎಸ್) ಜಾರಿಗೆ ಬರುತ್ತಿದೆ. ಈ ಡಿಜಿಟಲ್ ವ್ಯವಸ್ಥೆಯು ಸ್ವಯಂಚಾಲಿತ ಪರಿಶೀಲನೆ ಮತ್ತು ನೈಜ ಸಮಯದ ಟ್ರ್ಯಾಕಿಂಗ್ ಸೌಲಭ್ಯವನ್ನು ಒಳಗೊಂಡಿದೆ.

ಹೊಸ ವ್ಯವಸ್ಥೆಗೆ ಸುಗಮವಾಗಿ ಬದಲಾಗಲು, ಏಪ್ರಿಲ್ 26 ರಂದು ಎಲ್ಲಾ ಸಿಜಿಎಚ್‌ಎಸ್ ಆರೋಗ್ಯ ಕೇಂದ್ರಗಳನ್ನು ಸಾರ್ವಜನಿಕರಿಗೆ ಮುಚ್ಚಲಾಗಿತ್ತು. ಏಪ್ರಿಲ್ 28 ರಿಂದ ಹಳೆಯ ವೆಬ್‌ಸೈಟ್‌ಗಳಾದ www.cghs.gov.in ಮತ್ತು www.cghs.nic.in ಸಹ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ. ಈಗ ಎಲ್ಲಾ ಸೇವೆಗಳು ಕೇವಲ ಹೊಸ ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಿವೆ.

ಹೊಸ ಪೋರ್ಟಲ್‌ನಲ್ಲಿ ಮೊದಲ ಬಾರಿಗೆ ಲಾಗಿನ್ ಮಾಡುವಾಗ, ಫಲಾನುಭವಿಗಳು ತಮ್ಮ ಪಾಸ್‌ವರ್ಡ್ ಅನ್ನು ಮರುಹೊಂದಿಸಬೇಕಾಗುತ್ತದೆ. ಅರ್ಜಿಯ ಸ್ಥಿತಿಯ ಬಗ್ಗೆ ಮಾಹಿತಿಯನ್ನು ಎಸ್ಎಂಎಸ್ ಮತ್ತು ಇಮೇಲ್ ಮೂಲಕ ಕಾಲಕಾಲಕ್ಕೆ ನೀಡಲಾಗುತ್ತದೆ. ಇದರ ಜೊತೆಗೆ, ‘myCGHS’ ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಬಿಡುಗಡೆ ಮಾಡಲಾಗಿದ್ದು, ಇದರ ಮೂಲಕ ಕಾರ್ಡ್ ವರ್ಗಾವಣೆ, ಅವಲಂಬಿತರನ್ನು ಸೇರಿಸುವುದು ಮತ್ತು ಕಾರ್ಡ್ ಪ್ರಕಾರವನ್ನು ಬದಲಾಯಿಸುವಂತಹ ಅನೇಕ ಸೇವೆಗಳನ್ನು ಆನ್‌ಲೈನ್‌ನಲ್ಲಿಯೇ ಪಡೆಯಬಹುದು.

ಈ ಬದಲಾವಣೆಯ ಸಂದರ್ಭದಲ್ಲಿ, ಫಲಾನುಭವಿಗಳ ಹಳೆಯ ಡೇಟಾ, ಉದಾಹರಣೆಗೆ ಔಷಧಿ ಖರೀದಿ ದಾಖಲೆಗಳು ಮತ್ತು ರೆಫರಲ್ ಇತಿಹಾಸ ಸೇರಿದಂತೆ ಯಾವುದೇ ಮಾಹಿತಿಯನ್ನು ಅಳಿಸಲಾಗುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ. ಡೇಟಾ ಭದ್ರತೆಗೆ ಅತ್ಯುನ್ನತ ಆದ್ಯತೆ ನೀಡಲಾಗಿದೆ. ಹೊಸ ವ್ಯವಸ್ಥೆಯ ಕುರಿತು ಮಾಹಿತಿ ನೀಡಲು ಮತ್ತು ಸಹಾಯ ಮಾಡಲು ಎಲ್ಲಾ ಸಿಜಿಎಚ್‌ಎಸ್ ಕಚೇರಿಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾವುದೇ ಸಮಸ್ಯೆಗಳಿದ್ದಲ್ಲಿ, ಹತ್ತಿರದ ಸಿಜಿಎಚ್‌ಎಸ್ ಕಚೇರಿಯನ್ನು ಸಂಪರ್ಕಿಸಬಹುದು.

ಈ ಬದಲಾವಣೆಯು ಸಿಜಿಎಚ್‌ಎಸ್ ವ್ಯವಸ್ಥೆಯನ್ನು ತಾಂತ್ರಿಕವಾಗಿ ಉನ್ನತೀಕರಿಸುವುದಲ್ಲದೆ, ಫಲಾನುಭವಿಗಳಿಗೆ, ವಿಶೇಷವಾಗಿ ಪಿಂಚಣಿದಾರರು ಮತ್ತು ಹಿರಿಯ ನಾಗರಿಕರಿಗೆ ಆರೋಗ್ಯ ಸೇವೆಗಳನ್ನು ಪಡೆಯುವಲ್ಲಿ ಹೆಚ್ಚಿನ ಪಾರದರ್ಶಕತೆ, ವಿಶ್ವಾಸ ಮತ್ತು ಅನುಕೂಲತೆಯನ್ನು ಒದಗಿಸುತ್ತದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read