ನವದೆಹಲಿ: ಭಾರತೀಯ ಸೇನೆಯು ಇತ್ತೀಚೆಗೆ ನಡೆಸಿದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನದ ವಾಯುನೆಲೆಗಳ ಮೇಲೆ ನಡೆಸಿದ ನಿಖರವಾದ ದಾಳಿಯ ಉಪಗ್ರಹ ಚಿತ್ರಗಳು ಇದೀಗ ಲಭ್ಯವಾಗಿವೆ. ಈ ಚಿತ್ರಗಳು ಭಾರತದ ದಾಳಿಯ ತೀವ್ರತೆಯನ್ನು ಜಗಜ್ಜಾಹೀರು ಮಾಡುತ್ತಿವೆ.
ಎನ್‌ಡಿಟಿವಿ ಪಡೆದ ಈ ಉನ್ನತ-ರೆಸಲ್ಯೂಶನ್ ಚಿತ್ರಗಳು, ಸಿಂಧ್‌ನ ಸುಕೂರ್, ರಾವಲ್ಪಿಂಡಿಯ ನೂರ್ ಖಾನ್ ಮತ್ತು ಪಾಕಿಸ್ತಾನದ ಪಂಜಾಬ್‌ನ ರಹೀಮ್ ಯಾರ್ ಖಾನ್‌ನಲ್ಲಿರುವ ಪಾಕಿಸ್ತಾನಿ ಮಿಲಿಟರಿ ನೆಲೆಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ನಿರಂತರ ಮತ್ತು ತೀಕ್ಷ್ಣವಾದ ದಾಳಿಯಿಂದ ಉಂಟಾದ ಹಾನಿಯ ಪ್ರಮಾಣವನ್ನು ಕಣ್ಣಿಗೆ ಕಟ್ಟಿದಂತೆ ತೋರಿಸುತ್ತವೆ.
ಅಷ್ಟೇ ಅಲ್ಲದೆ, ಈ ಚಿತ್ರಗಳು ಪಾಕಿಸ್ತಾನ ವಾಯುಪಡೆಯ (ಪಿಎಎಫ್) ಪ್ರಮುಖ ನೆಲೆಗಳಾದ ಸರ್ಗೋಧಾದ ಮುಷಾಫ್, ಉತ್ತರ ಸಿಂಧ್‌ನ ಶಹಬಾಜ್ ಜಾಕೋಬಾಬಾದ್ ಮತ್ತು ಉತ್ತರ ಥಟ್ಟಾದ ಭೋಲಾರಿಗಳಿಗೂ ಗಂಭೀರ ಹಾನಿಯನ್ನುಂಟುಮಾಡಿರುವುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ರನ್‌ವೇಗಳಲ್ಲಿ ದೊಡ್ಡ ಕುಳಿಗಳು ಮತ್ತು ನಾಶವಾದ ಕಟ್ಟಡಗಳ ಚಿತ್ರಗಳು ಭಾರತದ ದಾಳಿಯ ನಿಖರತೆಯನ್ನು ಸಾರಿ ಹೇಳುತ್ತಿವೆ.

