ನವದೆಹಲಿ: ಭಾರತೀಯ ವಾಯುಸೇನೆಯ ಏರ್ ಆಪರೇಷನ್ಸ್ ಡೈರೆಕ್ಟರ್ ಜನರಲ್ ಏರ್ ಮಾರ್ಷಲ್ ಎ.ಕೆ. ಭಾರ್ತಿಯವರು ಇತ್ತೀಚೆಗೆ ನೀಡಿದ ಒಂದು ದಿಟ್ಟ ಹೇಳಿಕೆ ಇದೀಗ ಟೀ-ಶರ್ಟ್ ಡಿಸೈನ್ ಆಗಿ ಮಾರ್ಪಟ್ಟಿದೆ. “ನಮ್ಮ ಕೆಲಸ ಗುರಿಗಳನ್ನು ಹೊಡೆಯುವುದು, ಶವಗಳನ್ನು ಎಣಿಸುವುದಲ್ಲ” ಎಂಬ ಅವರ ಈ ಮಾತು ದೇಶಾದ್ಯಂತ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಬಲಿಯಾದ ನಂತರ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ, ಭಾರತೀಯ ಸಶಸ್ತ್ರ ಪಡೆಗಳು ನೀಡಿದ ಪ್ರತಿಕ್ರಿಯೆಗೆ ಜನರು ಅಭೂತಪೂರ್ವ ಬೆಂಬಲ ಸೂಚಿಸುತ್ತಿದ್ದಾರೆ. ಈ ಬೆಂಬಲವು ಇದೀಗ ವಿಶಿಷ್ಟ ರೂಪದಲ್ಲಿ ವ್ಯಕ್ತವಾಗುತ್ತಿದೆ – ಟೀ-ಶರ್ಟ್ಗಳ ಮೂಲಕ.
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಿಂದ ಪ್ರೇರಿತರಾದ ‘ಕಡಕ್ ಮರ್ಚ್’ ಎಂಬ ಮರ್ಚಂಡೈಸ್ ಸಂಸ್ಥೆಯು ಸೀಮಿತ ಆವೃತ್ತಿಯ ಟೀ-ಶರ್ಟ್ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಈ ಟೀ-ಶರ್ಟ್ಗಳಲ್ಲಿ ಡಿಜಿಎಂಒ ಅವರ ಇತ್ತೀಚಿನ ಪತ್ರಿಕಾಗೋಷ್ಠಿಯ ಪ್ರಮುಖ ಹೇಳಿಕೆಗಳನ್ನು ಬಳಸಲಾಗಿದ್ದು, ಏರ್ ಮಾರ್ಷಲ್ ಭಾರ್ತಿ ಅವರ ಉಕ್ತಿಯು ಅತ್ಯಂತ ಜನಪ್ರಿಯ ಡಿಸೈನ್ ಆಗಿ ಹೊರಹೊಮ್ಮಿದೆ.
ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ತಕ್ಷಣ, ಕಡಕ್ ಮರ್ಚ್ ‘ಆಪರೇಷನ್ ಸಿಂಧೂರ್’ ಥೀಮ್ನೊಂದಿಗೆ ಮೂರು ವಿನ್ಯಾಸದ ಟೀ-ಶರ್ಟ್ಗಳನ್ನು ಮಾರುಕಟ್ಟೆಗೆ ಬಿಟ್ಟಿತು. ಸಂಸ್ಥೆಯ ಸಿಇಒ ಆದಿ ಅರೋರಾ ಅವರು ಹೇಳುವಂತೆ, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ದೇಶಾದ್ಯಂತ 400 ಕ್ಕೂ ಹೆಚ್ಚು ಟೀ-ಶರ್ಟ್ಗಳು ಮಾರಾಟವಾಗಿವೆ. ಅದರಲ್ಲಿ ಹೆಚ್ಚಿನ ಬೇಡಿಕೆ ಏರ್ ಮಾರ್ಷಲ್ ಭಾರ್ತಿ ಅವರ ಹೇಳಿಕೆಯಿರುವ ಡಿಸೈನ್ಗೆ ಇದೆ.
ಪಾಡ್ಕಾಸ್ಟರ್ ಮತ್ತು ಕಂಟೆಂಟ್ ಕ್ರಿಯೇಟರ್ ಕುಶಾಲ್ ಮೆಹ್ರಾ ಅವರು ಈ ಕಲ್ಪನೆಯನ್ನು ಮೊದಲು ಎಕ್ಸ್ನಲ್ಲಿ ಹಂಚಿಕೊಂಡಿದ್ದರು. ಅದು ವೈರಲ್ ಆದ ನಂತರ, ಕಡಕ್ ಮರ್ಚ್ ತಕ್ಷಣವೇ ಈ ಡಿಸೈನ್ಗಳನ್ನು ತಯಾರಿಸಿತು. ಸಶಸ್ತ್ರ ಪಡೆಗಳಿಗೆ ತಮ್ಮ ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲು ಕಾತರರಾಗಿರುವ ಆನ್ಲೈನ್ ಗ್ರಾಹಕರಿಂದ ಈ ಸಂಗ್ರಹಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಂಗ್ರಹದಿಂದ ಬರುವ ಲಾಭವನ್ನು ಪುಲ್ವಾಮಾ ದಾಳಿಯ ಸಂತ್ರಸ್ತರ ಅಥವಾ ಭಾರತೀಯ ಸೈನಿಕರ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುವ ದತ್ತಿ ಸಂಸ್ಥೆಗೆ ನೀಡಲಾಗುವುದು ಎಂದು ಅರೋರಾ ತಿಳಿಸಿದ್ದಾರೆ.
ಏರ್ ಮಾರ್ಷಲ್ ಭಾರತಿ ಅವರ ಮತ್ತೊಂದು ಹೇಳಿಕೆಯಾದ “ಕಿರನಾ ಹಿಲ್ಸ್ನಲ್ಲಿ ಏನಿದೆ ಎಂದು ನನಗೆ ತಿಳಿದಿಲ್ಲ” ಎಂಬುದು ಸಹ ಟೀ-ಶರ್ಟ್ನಲ್ಲಿ ಕಾಣಿಸಿಕೊಂಡಿದೆ. ಭಾರತೀಯ ವಾಯುಸೇನೆಯು ಕಿರನಾ ಹಿಲ್ಸ್ನಲ್ಲಿರುವ ಪಾಕಿಸ್ತಾನದ ಪರಮಾಣು ಸ್ಥಾವರವನ್ನು ಗುರಿಯಾಗಿಸಿದೆಯೇ ಎಂಬ ವರದಿಗಾರರ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಅನೇಕರು, ಈಗಾಗಲೇ ಈ ಟೀ-ಶರ್ಟ್ಗಳನ್ನು ಆರ್ಡರ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಹ ಆಪರೇಷನ್ ಸಿಂಧೂರ್ ನಂತರ ದೇಶವನ್ನುದ್ದೇಶಿಸಿ ಮಾತನಾಡುತ್ತಾ, ಭಾರತವು ಪ್ರತಿಕ್ರಿಯಿಸಲು ಸಿದ್ಧವಿದೆ ಮತ್ತು ಭಯೋತ್ಪಾದಕರಿಗೆ ಬೆಂಬಲ ನೀಡುವ ಸರ್ಕಾರಗಳ ನಡುವೆ ಯಾವುದೇ ಭೇದವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
Our job is to hit the targets not to count the body bags. pic.twitter.com/p3NgOgWIPV
— Smriti Z Irani (@smritiirani) May 11, 2025

