ನವದೆಹಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ಇದೀಗ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಾವೆಲ್ಲರೂ ದೇಶದ ಸಾಮರ್ಥ್ಯ ಮತ್ತು ಸಂಯಮ ಎರಡನ್ನು ನೋಡಿದ್ದೇವೆ ಎಂದು ಹೇಳಿದ್ದಾರೆ.
ಅವರ ಭಾಷಣದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಭಾರತದ ಶಕ್ತಿ ಮತ್ತು ಸಂಯಮವನ್ನು ವಿಶ್ವ ಗಮನಿಸಿದೆ. ಸೈನಿಕರು, ವಿಜ್ಞಾನಿಗಳಿಗೆ ಧನ್ಯವಾದ ಹೇಳುತ್ತೇನೆ. ಭಾರತೀಯ ಸೇನೆಯನ್ನು ಅಭಿನಂದಿಸುತ್ತೇನೆ. ನಮ್ಮ ವಿಜ್ಞಾನಿಗಳು, ರಕ್ಷಣಾ ದಳವನ್ನು ಅಭಿನಂದಿಸುತ್ತೇನೆ. ದೇಶದ ಪ್ರತಿ ತಾಯಿ ಸಹೋದರಿಯರಿಗೆ ಈ ಪರಾಕ್ರಮ ಸಮರ್ಪಿಸುತ್ತೇವೆ.
ಪಹಲ್ಗಾಮ್ ನಲ್ಲಿ ಧರ್ಮ ಕೇಳಿ ಕುಟುಂಬದ ಎದುರು ಕೊಲೆ ಮಾಡಿದರು. ಅಮಾಯಕರನ್ನು ನಿರ್ದಯವಾಗಿ ಕೊಂದರು. ಇದು ಉಗ್ರವಾದದ ಅತ್ಯಂತ ಕ್ರೂರ ಮುಖ. ಇದು ನನಗೆ ಅತ್ಯಂತ ದುಃಖ ತಂದ ವಿಚಾರವಾಗಿತ್ತು. ಹೆಂಡತಿ, ಮಕ್ಕಳ ಮುಂದೆಯೇ ಕೊಲೆ ಮಾಡಿದರು. ಸಿಂಧೂರ ಅಳಿಸಿದರೆ ಏನಾಗುತ್ತದೆ ಎಂದು ಅವರಿಗೆ ಗೊತ್ತಾಗಿದೆ.
ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ ಉಗ್ರರಿಗೆ ಪಾಠ ಕಲಿಸಲಾಗಿದೆ. ಆಪರೇಷನ್ ಸಿಂಧೂರ ದೇಶದ ಹೆಣ್ಣು ಮಕ್ಕಳಿಗೆ ಸಮರ್ಪಣೆ. ಉಗ್ರರನ್ನು ಮಣ್ಣಲ್ಲೇ ಮಣ್ಣಾಗಿಸಲು ಸೇನೆಗೆ ಸಂಪೂರ್ಣ ಸ್ವಾತಂತ್ರ ಕೊಟ್ಟಿದ್ದೆವು. ಭಾರತೀಯ ಸೇನೆ ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳನ್ನು ನಾಶ ಮಾಡಿತು. ಇದು ದೇಶದ ಕೋಟಿ ಕೋಟಿ ಜನರ ಪ್ರತಿಬಿಂಬವಾಗಿದೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ಭಾರತೀಯ ಸೇನೆ ಪಾಕಿಸ್ತಾನದಲ್ಲಿ ಉಗ್ರರನ್ನು ಹೊಡೆದು ಹಾಕಿದೆ. ದೇಶ ಒಂದಾದರೆ ದೊಡ್ಡ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿದೆ. ಡ್ರೋನ್ ದಾಳಿಯಿಂದ ಉಗ್ರರ ಕಟ್ಟಡವಲ್ಲ ಅವರ ಆತ್ಮವಿಶ್ವಾಸ ಕುಸಿದಿದೆ. ಪ್ರತಿ ಭಾರತೀಯರ ಪರವಾಗಿ ಸೈನಿಕರಿಗೆ ಧನ್ಯವಾದಗಳು. ಪ್ರತಿ ಭಾರತೀಯರು ಉಗ್ರರ ವಿರುದ್ಧ ಸಮರಕ್ಕೆ ಸಿದ್ಧವಾಗಿದ್ದಾರೆ.