ನವದೆಹಲಿ: ಆಪರೇಷನ್ ಸಿಂಧೂರ್‌ನಲ್ಲಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಮತ್ತೊಬ್ಬ ಯೋಧ ಹುತಾತ್ಮರಾಗಿದ್ದಾರೆ. ಮೇ 9 ಮತ್ತು 10 ರ ಮಧ್ಯರಾತ್ರಿ ಜಮ್ಮು ವಿಭಾಗದ ಆರ್.ಎಸ್. ಪುರದಲ್ಲಿ ಪಾಕಿಸ್ತಾನ ರೇಂಜರ್ ಗಳು ನಡೆಸಿದ ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ ಗಾಯಗೊಂಡ ಕಾನ್‌ಸ್ಟೆಬಲ್ ದೀಪಕ್ ಚಿಂಗಾಖಮ್ ಹುತಾತ್ಮರಾಗಿದ್ದಾರೆ. ಮಣಿಪುರದ ದೀಪಕ್ ಕೇವಲ 25 ವರ್ಷ ವಯಸ್ಸಿನವರಾಗಿದ್ದಾರೆ.
ಏತನ್ಮಧ್ಯೆ, ಶನಿವಾರ ಸಂಜೆಯವರೆಗೆ ಶೆಲ್ ದಾಳಿ ಮತ್ತು ಡ್ರೋನ್ ಚಟುವಟಿಕೆಗೆ ಸಾಕ್ಷಿಯಾಗಿದ್ದ ಅಂತರರಾಷ್ಟ್ರೀಯ ಗಡಿ(ಐಬಿ) ಮತ್ತು ನಿಯಂತ್ರಣ ರೇಖೆ (ಎಲ್‌ಒಸಿ) ಮೇ 11 ರ ಬೆಳಿಗ್ಗೆ 4.40 ರಿಂದ ಶಾಂತವಾಗಿದೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ಆರ್.ಎಸ್. ಪುರದಲ್ಲಿ ಇತರ ಆರು ಜನರೊಂದಿಗೆ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡ ಬಿಎಸ್‌ಎಫ್ ಸಬ್-ಇನ್‌ಸ್ಪೆಕ್ಟರ್ ಎಂಡಿ ಇಮ್ತಿಯಾಜ್ ಹುತಾತ್ಮರಾದರು. ಚಿಕಿತ್ಸೆ ಫಲಿಸದೇ ದೀಪಕ್ ಕೂಡ ಹುತಾತ್ಮರಾಗಿದ್ದಾರೆ.
ರಾಷ್ಟ್ರದ ಸೇವೆಯಲ್ಲಿ ಬಿಎಸ್‌ಎಫ್ ಬ್ರೇವ್‌ಹಾರ್ಟ್ ಕಾನ್‌ಸ್ಟೆಬಲ್ (ಜಿಡಿ) ದೀಪಕ್ ಚಿಮ್‌ಗಖಾಮ್ ಮಾಡಿದ ಅತ್ಯುನ್ನತ ತ್ಯಾಗಕ್ಕೆ ನಾವು ವಂದಿಸುತ್ತೇವೆ. ಮೇ 10, 2025 ರಂದು ಜಮ್ಮು ಜಿಲ್ಲೆಯ ಆರ್.ಎಸ್. ಪುರ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಗಡಿಯಲ್ಲಿ ನಡೆದ ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ ಅವರು ಮಾರಣಾಂತಿಕವಾಗಿ ಗಾಯಗೊಂಡರು. ಮೇ 11ರಂದು ಹುತಾತ್ಮರಾದರು. ಡಿಜಿ ಬಿಎಸ್ಎಫ್ ಮತ್ತು ಎಲ್ಲಾ ಶ್ರೇಣಿಗಳು ಅವರ ಕುಟುಂಬಕ್ಕೆ ತಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತವೆ ಎಂದು ಬಿಎಸ್ಎಫ್ ಜಮ್ಮು ತಿಳಿಸಿದೆ.
ಜಮ್ಮುವಿನ ಪಲೋರಾದಲ್ಲಿರುವ ಬಿಎಸ್ಎಫ್ ಫ್ರಾಂಟಿಯರ್ ಪ್ರಧಾನ ಕಚೇರಿಯಲ್ಲಿ ಪೂರ್ಣ ಗೌರವಗಳೊಂದಿಗೆ ಅಗಲಿದ ಧೈರ್ಯಶಾಲಿ ದೀಪಕ್ ಅವರಿಗೆ ಶ್ರದ್ಧಾಂಜಲಿ ಸಮಾರಂಭ ನಡೆಯಲಿದೆ.