ನವದೆಹಲಿ: ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಕಾಯಂ ನೇಮಕಾತಿ ನೀಡುವ ಕುರಿತಾಗಿ 2020ರಲ್ಲಿ ಸುಪ್ರೀಂಕೋರ್ಟ್ ನಿಂದ ಐತಿಹಾಸಿಕ ತೀರ್ಪು ನೀಡಲಾಗಿತ್ತು. ಈ ತೀರ್ಪು ನೀಡುವ ವೇಳೆ ಕರ್ನಲ್ ಸೋಫಿಯಾ ಖುರೇಷಿ ಅವರ ಸಾಧನೆಯನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿತ್ತು.
ಪಾಕಿಸ್ತಾನ ಉಗ್ರ ನೆಲೆಗಳ ಮೇಲೆ ಆಪರೇಷನ್ ಸಿಂಧೂರ ದಾಳಿ ನಡೆಸಿದ ಕುರಿತಾಗಿ ಸೋಫಿಯಾ ಖುರೇಷಿ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಾಚರಣೆಯ ಮಾಹಿತಿ ನೀಡಿದ್ದರು. ಅವರ ಕುರಿತಾಗಿ ಸುಪ್ರೀಂ ಕೋರ್ಟ್ ಮಹಿಳೆಯರಿಗೆ ಕಾಯಂ ನೇಮಕಾತಿ ನೀಡುವ ಬಗ್ಗೆ ತೀರ್ಪು ನೀಡುವ ಸಂದರ್ಭದಲ್ಲಿ ಅನೇಕ ಮಂದಿ ಮಹಿಳಾ ಅಧಿಕಾರಿಗಳ ಸಾಧನೆಗಳನ್ನು ಉಲ್ಲೇಖಿಸಿದ್ದು, ಸೋಫಿಯಾ ಅವರ ಸಾಧನೆಯನ್ನು ಕೂಡ ಉದಾಹರಣೆಯಾಗಿ ನೀಡಿತ್ತು.
ಮೊದಲ ಬಾರಿಗೆ ಭಾರತ ಬೃಹತ್ ಪ್ರಮಾಣ ಮಟ್ಟದಲ್ಲಿ ಆಯೋಜಿಸಿದ್ದ ಎಕ್ಸೈಸ್ ಫೋರ್ಸ್ 18 ಹೆಸರಿನ ವಿವಿಧ ದೇಶಗಳ ಸಮರಾಭ್ಯಾಸದ ಸಂದರ್ಭದಲ್ಲಿ ಭಾರತ ಸೇನಾ ತಂಡವನ್ನು ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಮುನ್ನಡೆಸಿದ್ದರು ಎಂದು ಸುಪ್ರೀಂಕೋರ್ಟ್ ಶ್ಲಾಘಿಸಿತ್ತು.
2006ರಲ್ಲಿ ಕಾಂಗೋದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಸೋಫಿಯಾ ಖುರೇಷಿ ಅವರು ಪಾಲ್ಗೊಂಡಿದ್ದರು. ಈ ವೇಳೆ ಕದನ ವಿರಾಮ ಉಲ್ಲಂಘನೆಯಂತಹ ಘಟನೆಗಳ ಮೇಲ್ವಿಚಾರಣೆ ಮತ್ತು ಮಾನವೀಯ ನೆರವು ಚಟುವಟಿಕೆಗಳ ನೇತೃತ್ವವನ್ನು ಅವರು ವಹಿಸಿದ್ದರು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡುವ ವೇಳೆ ಉಲ್ಲೇಖಿಸಿತ್ತು.
2020 ರಲ್ಲಿ ಸುಪ್ರೀಂ ಕೋರ್ಟ್ ಕರ್ನಲ್ ಸೋಫಿಯಾ ಖುರೇಷಿ ಅವರ ಸಾಧನೆಗಳನ್ನು ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗವನ್ನು ನೀಡುವ ತನ್ನ ಮಹತ್ವದ ತೀರ್ಪಿನಲ್ಲಿ(ರಕ್ಷಣಾ ಸಚಿವಾಲಯದ ಕಾರ್ಯದರ್ಶಿ vs ಬಬಿತಾ ಪುನಿಯಾ ಮತ್ತು ಇತರರು) ನಿರ್ದಿಷ್ಟವಾಗಿ ಗುರುತಿಸಿದೆ ಎಂಬುದು ಗಮನಾರ್ಹ.
ಮಹಿಳಾ ಅಧಿಕಾರಿಗಳು ಶಾಶ್ವತ ಆಯೋಗಕ್ಕೆ ಸೂಕ್ತವಲ್ಲ ಎಂಬ ಕೇಂದ್ರ ಸರ್ಕಾರದ ವಾದವನ್ನು ತಿರಸ್ಕರಿಸುತ್ತಾ, ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಬರೆದ ತೀರ್ಪು ಹಲವಾರು ಮಹಿಳಾ ಕಿರು ಸೇವಾ ಆಯೋಗದ ಅಧಿಕಾರಿಗಳ ಅನುಕರಣೀಯ ಸೇವೆಯನ್ನು ಎತ್ತಿ ತೋರಿಸಿದೆ. ಉಲ್ಲೇಖಿಸಲಾದ ಹನ್ನೆರಡು ಹೆಸರುಗಳಲ್ಲಿ ಖುರೇಷಿ ಅವರ ಹೆಸರನ್ನು ಮೊದಲು ಉಲ್ಲೇಖಿಸಲಾಗಿದೆ.