ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹಿನ್ನೆಲೆಯಲ್ಲಿ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಐಪಿಎಲ್ ಪಂದ್ಯವನ್ನು ಸ್ಥಳಾಂತರಿಸಲಾಗಿದೆ.
ಮೇ 11ರಂದು ಧರ್ಮಶಾಲಾದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಐಪಿಎಲ್ ಪಂದ್ಯ ನಿಗದಿಯಾಗಿತ್ತು. ಉದ್ವಿಗ್ನಸ್ಥಿತಿ ಕಾರಣಕ್ಕೆ ಪಂದ್ಯವನ್ನು ಧರ್ಮಶಾಲಾದಿಂದ ಅಹ್ಮದಾಬಾದ್ ಗೆ ಸ್ಥಳಾಂತರಿಸಲಾಗಿದೆ. ಗುಜರಾತ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಅನಿಲ್ ಪಟೇಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಮೇ 11ರಂದು ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವನ್ನು ಅಹಮದಾಬಾದ್ ಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದಿಂದ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಗಡಿಗೆ ಹೊಂದಿಕೊಂಡ ರಾಜ್ಯಗಳು ಮತ್ತು ನಗರಗಳ ವಿಮಾನ ನಿಲ್ದಾಣಗಳನ್ನು ಕೇಂದ್ರ ಸರ್ಕಾರ ಬಂದ್ ಮಾಡಿಸಿದೆ. ಎಲ್ಲಾ ನಾಗರಿಕ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಧರ್ಮಶಾಲಾ ಅಂತರಾಷ್ಟ್ರೀಯ ಗಡಿಯಿಂದ 150 ಕಿ.ಮೀ. ದೂರದಲ್ಲಿದ್ದು, ಈ ನಿಲ್ದಾಣವನ್ನು ಕೂಡ ಮುಚ್ಚಲಾಗಿದೆ. ಹೀಗಾಗಿ ಐಪಿಎಲ್ ಪಂದ್ಯವನ್ನೂ ಸ್ಥಳಾಂತರ ಮಾಡಲಾಗಿದೆ.