ಕೋಲಾರ: ಕೋಲಾರ ಜಿಲ್ಲೆಯ ಕೆಜಿಎಫ್ ನ ಊರಿಗಾಂವ್ ನಲ್ಲಿರುವ ಬಿಜಿಎಂ ಎಲ್ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಎಲ್ಲಾ ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಶಾಲೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪರದಾಡುವ ಸ್ಥಿತಿ ಬಂದಿದೆ.
ಇತ್ತೀಚೆಗೆ ಪ್ರಕಟವಾದ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶದಲ್ಲಿ ಶಾಲೆಯ ಅಷ್ಟೂ ಮಕ್ಕಳು ಅನುತ್ತೀರಣರಾಗಿದ್ದು, ಈ ಶಾಲೆಗೆ ಸೇರುವ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಬೇಕಾದ ಸ್ಥಿತಿ ಇದೆ.
ಈ ಬಾರಿ ಎಸ್.ಎಸ್.ಎಲ್.ಸಿಯಲ್ಲಿ 38 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರಲ್ಲಿ ಎಲ್ಲರೂ ಫೇಲ್ ಆಗಿದ್ದಾರೆ. ಎಲ್ಲಾ ಮಕ್ಕಳಿಗೂ ಹಿಂದಿ ವಿಷಯದಲ್ಲಿ ಶೂನ್ಯ ಅಂಕ ಬಂದಿದೆ. ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಈ ಶಾಲೆಯಿಂದ 28 ವಿದ್ಯಾರ್ಥಿಗಳು ಎಸ್.ಎಸ್.ಎಲ್ ಸಿ ಪರೀಕ್ಷೆ ಬರೆಯಲಿದ್ದಾರೆ. ಅವರ ಭವಿಷ್ಯದ ಕಥೆಯೇನು? ಎಂಬುದು ಪೋಷಕರನ್ನು ಕಾಡುತ್ತಿರುವ ಪ್ರಶ್ನೆ.
ಬಿಜಿಎಂಎಲ್ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳೆಲ್ಲರೂ ಪರಿಶಿಷ್ಟ ಜಾತಿಗೆ ಸೇರಿದವರು. ಪ್ರಾಥಮಿಕ ಶಾಲೆಯಲ್ಲಿ 80 ವಿದ್ಯಾರ್ಥಿಗಳು ಹಾಗೂ ಪ್ರೌಢ ಶಾಲೆಯಲ್ಲಿ 80 ವಿದ್ಯಾರ್ಥಿಗಳಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ 2020ರಿಂದ ಕೇವಲ ಓರ್ವ ಶಿಕ್ಷಕನಿದ್ದರೆ, ಹಳೇ ವಿದ್ಯಾರ್ಥಿಗಳ ಸಂಘ ಕೆಲ ಕಾಲ ಅತಿಥಿ ಶಿಕ್ಷಕರನ್ನು ನೇಮಿಸಿತ್ತು. ನಂತರ ಅದು ವಿವಾದಕ್ಕೀಡಾಗಿ ತನ್ನ ಸೇವೆ ಸ್ಥಗಿತಗೊಳಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೇರೆಶಾಲೆಯ ಶಿಕ್ಷಕರನ್ನು ನಿಯೋಜಿಸಿದರೂ ಪ್ರಯೋಜನವಾಗಿಲ್ಲ. ಕಲೆದ ವರ್ಷ ಮೂವರು ಶಿಕ್ಷಕರು ಪ್ರೌಢಶಾಲೆಗೆ ನೇಮಕಗೊಂಡಿದ್ದರು. ಆದರೆ ವಿಜ್ಞಾನ ಮತ್ತು ಹಿಂದಿ ವಿಷಯಕ್ಕೆ ಶಿಕ್ಷಕರೇ ಇಲ್ಲ.
ಹಿಂದಿ ವಿಷಯಕ್ಕೆ ಶಿಕ್ಷಕರಿಲ್ಲದ ಕಾರಣ ಎಲ್ಲಾ ವಿದ್ಯಾರ್ಥಿಗಳು ಹಿಂದಿಯಲ್ಲಿ ಫೇಲ್ ಆಗಿದ್ದಾರೆ. ಶಿಕ್ಷಕರಿದ್ದಿದ್ದರೆ ಎಲ್ಲಾ ವಿದ್ಯಾರ್ಥಿಗಳು ಪಾಸ್ ಆಗುತ್ತಿದ್ದರು. ಫಲಿತಾಂಶವೂ ಸುಧಾರಿಸುತ್ತಿತ್ತು ಎಂದು ಮುಖ್ಯಶಿಕ್ಷಕ ಮಾಲತೇಶ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಪ್ರಾಥಮಿಕ ಶಾಲೆಯಲ್ಲಿ ಓರ್ವ ಶಿಕ್ಷಕನ ಬದಲಾಗಿ ಬೇರೆ ಶಿಕ್ಷಕರಿಲ್ಲದ ಕಾರಣ ಅಲ್ಲಿ ಮಕ್ಕಳು ಓದುವ ಬದಲು ಬರಿ ಆಟದಲ್ಲೇ ಕಾಲ ಕಳೆಯುತ್ತಾರೆ. ಅದೇ ವಿದ್ಯಾರ್ಥಿಗಳು ಪ್ರೌಢಶಾಲೆಗೆ ಬಂದಾಗ ವಿದ್ಯಾಭ್ಯಾಸ, ಕಲಿಕೆ ಕಷ್ಟಸಾಧ್ಯವಾಗಿದೆ. ಇದರಿಂದ ಫಲಿತಾಂಶ ದುಸ್ಥಿತಿಗೆ ಬಂದಿದೆ. ಸರ್ಕಾರ ಬಿಜಿಎಂಎಲ್ ಶಾಲೆಯನ್ನು ತನ್ನ ಸುಪರ್ದಿಗೆ ಪಡೆಯುತ್ತಿದೆ. ಆಗಲಾದರೂ ಶಾಲೆಯ ಶೈಕ್ಷಣಿಕ ಪ್ರಗತಿಯಾಗಲಿದೆಯೇ? ಕಾದುನೋಡಬೇಕಿದೆ.