ಬೆಂಗಳೂರು : ‘ಆಪರೇಷನ್ ಸಿಂಧೂರ್’ ಯಶಸ್ವಿಯಾದ ಹಿನ್ನೆಲೆ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಏನಿದೆ ಆದೇಶದಲ್ಲಿ..?
ದಿನಾಂಕ:22.04.2025ರಂದು ಕಾಶ್ಮೀರದ ಪಹಲಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಉತ್ತರವಾಗಿ, ದಿನಾಂಕ:07.05.2025ರಂದು ಮುಂಜಾನೆ ಭಾರತವು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಸೇನಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ.
ಆದ್ದರಿಂದ ಕರ್ನಾಟಕ ಸರ್ಕಾರದ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ರವರು ಭಾರತೀಯ ಸೇನೆಯ ಕಾರ್ಯಾಚರಣೆಗೆ ಶುಭಾಶಯವನ್ನು ಸಲ್ಲಿಸಿರುತ್ತಾರೆ.ನಮ್ಮ ಭಾರತದ ಹೆಮ್ಮೆಯ ಸೇನಾ ಕಾರ್ಯಾಚರಣೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಮಾನ್ಯ ಸಚಿವರ ಸೂಚನೆಯ ಮೇರೆಗೆ ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಎಲ್ಲಾ ದೇವಾಲಯಗಳಲ್ಲಿ ಭಾರತೀಯ ಸೇನೆಯ ಹೆಸರಿನಲ್ಲಿ ಹಾಗೂ ಭಾರತೀಯ ಯೋಧರಿಗೆ ಒಳಿತಾಗಲಿ ಎಂದು ಹಾರೈಸುತ್ತಾ ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿಯನ್ನು ಭಗವಂತನು ಅನುಗ್ರಹಿಸಿ ಕರುಣಿಸಲಿ ಎಂದು ಪ್ರಾರ್ಥಿಸಿ ವಿಶೇಷ ಸಂಕಲ್ಪದೊಂದಿಗೆ ಪೂಜೆಗಳನ್ನು ನೆರವೇರಿಸಲು ಕ್ರಮ ಕೈಗೊಳ್ಳಲು ಈ ಮೂಲಕ ಆದೇಶಿಸಿದೆ. ಮಾನ್ಯ ಸಚಿವರ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು ಎಂದು ಆದೇಶಿಸಿದೆ.
