ಮಂಡ್ಯ: ಮಗಳನ್ನು ಹತ್ಯೆಗೈದಿದ್ದ ಆರೋಪಿಯ ತಂದೆಯನ್ನೇ ಬರ್ಬರವಾಗಿ ಅಪ್ಪ ಕೊಲೆಗೈದಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿಯಲ್ಲಿ ನಡೆದಿದೆ.
ಮಗಳ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳಲು ಆಕೆಯ ತಂದೆ ಆರೋಪಿಯ ಅಪ್ಪನನ್ನೇ ಹತ್ಯೆ ಮಾಡಿದಾನೆ. ಮಾಣಿಕ್ಯನಹಳ್ಳಿ ನರಸಿಂಹೇಗೌಡ ಕೊಲೆಯಾದ ವ್ಯಕ್ತಿ. ವೆಂಕಟೇಶ್ ಕೊಲೆ ಆರೋಪಿ.
ನರಸಿಂಹೇಗೌಡ ಅವರ ಮಗ ನಿತೀಶ್, ವೆಂಕಟೇಶ್ ಅವರ ಮಗಳು ಶಿಕ್ಷಕಿ ದೀಪಿಕಾಳನ್ನು ಕಳೆದ ವರ್ಷ ಕೊಲೆಗೈದಿದ್ದ. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ವೆಂಕಟೇಶ್, ನಿತೀಶ್ ತಂದೆ ನರಸಿಂಹೇಗೌಡನನ್ನು ಹತ್ಯೆ ಮಾಡಿದ್ದಾನೆ.
ದೀಪಿಕಾ ಹಾಗೂ ನಿತೀಶ್ ಸ್ನೇಹಿತರು. ಇದನ್ನು ಗಮನಿಸಿದ ದೀಪಿಕಾ ಪತಿ ಹಾಗೂ ಕುಟುಂಬದವರು ನಿತೀಶ್ ಗೆ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ದೀಪಿಕಾ ಬಳಿ ವಿಚಾರಿಸಿದಾಗ ಆತ ನನಗೆ ತಮ್ಮನಿದ್ದಂತೆ ಎಂದಿದ್ದಳು. ಕುಟುಂಬದವರ ಕಿರಿಕಿರಿಗೆ ನೊಂದು ಇಬ್ಬರೂ ಅಂತರ ಕಾಯ್ದುಕೊಂಡಿದ್ದರು. ದೀಪಿಕಾಳ ಸ್ನೇಹದಿಂದ ದೂರಾಗಿದ್ದ ನಿತೇಶ್, ಆಕೆಯ ಕುಟುಂಬದವರ ಎಚ್ಚರಿಕೆಗೆ ಕೋಪಗೊಂಡಿದ್ದ. 2024ರ ಜ.22ರಂದು ತನ್ನ ಹುಟ್ತುಹಬ್ಬದ ದಿನ ನಿತೇಶ್, ದೀಪಿಕಾಳನ್ನು ಬೆಟ್ಟದ ತಪ್ಪಲಿಗೆ ಕರೆಸಿಕೊಂಡಿದ್ದ. ಹುಟ್ಟುಹಬ್ಬಕ್ಕೆ ಆತನಿಗೆ ಶರ್ಟ್ ಗಿಫ್ಟ್ ಕೊಡಲೆಂದು ದೀಪಿಕಾ ಹೋಗಿದ್ದಳು, ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಕೋಪದ ಬರದಲ್ಲಿ ದೀಪಿಕಾಳನ್ನು ಹತ್ಯೆಗೈದ ನಿತೇಶ್, ಶವವನ್ನು ಬೆಟ್ಟದ ದಪ್ಪಲಿನಲ್ಲಿ ಎಸೆದು ಎಸ್ಕೇಪ್ ಆಗಿದ್ದ. ಮಂಡ್ಯ ಪೊಲೀಸರು ಆರ್ಓಪಿಯನ್ನು ಬಂಧಿಸಿ ಜೈಲಿಗಟ್ಟಿದ್ದರು.
ಜಾಮೀನು ಪಡೆದು ನಿತೇಶ್ ಜೈಲಿನಿಂದ ಹೊರಬಂದಿದ್ದ. ತನ್ನ ಮಗಳನ್ನು ಹತ್ಯೆಗೈದ ನಿತೇಶ್ ನನ್ನು ಹೇಗಾದರೂ ಮಾಡಿ ಮುಗಿಸಬೇಕೆಂದು ಕಾಯುತ್ತಿದ್ದ ವೆಂಕಟೇಶ್ ಗೆ ಭಾನುವಾರ ನಿತೇಶ್ ತಂಗಿಯ ವಿವಾಹ ಧರ್ಮಸ್ಥಳದಲ್ಲಿ ನಡೆಯಲಿದೆ ಎಂಬುದು ಗೊತ್ತಾಗಿದೆ. ಇದರಿಂದ ಅಸಮಾಧಾನಗೊಂಡಿದ್ದ ವೆಂಕಟೇಶ್, ನಿತೇಶ್ ತಂದೆ ನರಸಿಂಹೇಗೌಡನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನನ್ನ ಮಗಳನ್ನು ಕೊಲೆಗೈದು ಈಗ ನಿನ್ನ ಮಗಳನ್ನು ಮದುವೆ ಮಾಡ್ತೀಯಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಕೊಲೆ ಬಳಿಕ ಸ್ಥಳದಿಂದ ವೆಂಕಟೇಶ್ ಪರಾರಿಯಾಗಿದ್ದಾನೆ.
ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.