ಬೆಂಗಳೂರು: 2025 -26ನೇ ಶೈಕ್ಷಣಿಕ ಶಾಲೆಗೆ ಒಂದನೇ ತರಗತಿ ಪ್ರವೇಶಕ್ಕೆ ಶಾಲಾ ಶಿಕ್ಷಣ ಇಲಾಖೆ ವಯೋಮಿತಿ ಸಡಿಲಿಕೆ ಮಾಡಿದೆ. ಉಳಿದಂತೆ ಪೂರ್ವ ಪ್ರಾಥಮಿಕ ಪ್ರವೇಶಕ್ಕೆ ಕಳೆದ ವರ್ಷದ ವಯೋಮಿತಿ ಅನುಸರಿಸುವುದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಗಿದೆ. ಈ ಸಂಬಂಧ ಶಿಕ್ಷಣ ಅಧಿಕಾರಿಗಳು ಮತ್ತು ಶಾಲಾ ಮುಖ್ಯಸ್ಥರಿಗೆ ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಸೂಚನೆ ನೀಡಿದ್ದಾರೆ.
ಎಲ್.ಕೆ.ಜಿ.ಗೆ 4 ವರ್ಷ, ಯುಕೆಜಿಗೆ 5 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ತರಗತಿ ಎಲ್‌ಕೆಜಿಗೆ ಸೇರ್ಪಡೆ ಮಾಡಲು 4 ವರ್ಷ ತುಂಬಿರಬೇಕು ಎನ್ನುವ ನಿಯಮ 2023- 24 ರಿಂದಲೇ ಜಾರಿಯಲ್ಲಿದೆ. ಅನೇಕ ಪೂರ್ವ ಪ್ರಾಥಮಿಕ ಶಾಲೆಗಳು ಈ ನಿಯಮವನ್ನು ಪಾಲಿಸದೆ ಮಕ್ಕಳಿಗೆ ಬೇಕಾಬಿಟ್ಟಿ ಪ್ರವೇಶ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಈ ವರ್ಷ ಗೊಂದಲ ಉಂಟಾಗಿ ಹಲವು ಪೋಷಕರು ಶಿಕ್ಷಣ ಸಚಿವರ ಮೇಲೆ ಒತ್ತಡ ಹೇರಿ ಈ ವರ್ಷದಿಂದ ಜಾರಿಯಾಗಬೇಕಿದ್ದ ಒಂದನೇ ತರಗತಿಗೆ ಜೂನ್ ಒಂದಕ್ಕೆ ಆರು ವರ್ಷ ತುಂಬಿರಬೇಕು ಎಂಬ ನಿಯಮವನ್ನು ಸಡಿಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸರ್ಕಾರ ಈ ವರ್ಷದ ಮಟ್ಟಿಗೆ ಒಂದನೇ ತರಗತಿ ಪ್ರವೇಶಕ್ಕೆ 5.5 ವರ್ಷ ತುಂಬಿರುವ ಪೂರ್ವ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ ಮಕ್ಕಳಿಗೆ ಒಂದನೇ ತರಗತಿಗೆ ಪ್ರವೇಶ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಆದರೆ, ಕೆಲವು ಪೂರ್ವ ಪ್ರಾಥಮಿಕ ಶಾಲೆಗಳು ಮತ್ತು ಪೋಷಕರು ಜೂನ್ 1ಕ್ಕೆ ನಾಲ್ಕು ವರ್ಷ ತುಂಬಿದ ತುಂಬದಿದ್ದರೂ ಮಕ್ಕಳನ್ನು ಎಲ್‌ಕೆಜಿಗೆ ದಾಖಲಿಸಿಕೊಳ್ಳುತ್ತಿರುವ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ನಿಯಮಬಾಹಿರವಾಗಿ ಈಗ ಶಾಲೆಗೆ ದಾಖಲು ಮಾಡಿ ಆನಂತರ ಶೈಕ್ಷಣಿಕ ವರ್ಷಗಳ ಆರಂಭದಲ್ಲಿ ಮತ್ತೆ ಸರ್ಕಾರದ ಮೇಲೆ ನಿಯಮ ಸಡಿಲಗೊಳಿಸಲು ಒತ್ತಡ ಹೇರಿ ಗೊಂದಲ ಸೃಷ್ಟಿಸುವುದನ್ನು ತಡೆಯುವ ಉದ್ದೇಶದಿಂದ ಶಿಕ್ಷಣ ಇಲಾಖೆ ಶಾಲಾ ಮಕ್ಕಳ ದಾಖಲಾತಿಗೆ ವಯೋಮತಿ ನಿಯಮ ಪಾಲಿಸುವಂತೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದೆ.