ಬೆಂಗಳೂರು: ಪಡಿತರ ಚೀಟಿಗಾಗಿ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಶೀಘ್ರವೇ ಹೊಸ ಪಡಿತರ ಚೀಟಿ ವಿತರಿಸಲಾಗುವುದು ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಆಹಾರ ಇಲಾಖೆ ಪ್ರಗತಿ ಪರಿಶೀಲನೆ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಈಗಾಗಲೇ ಪಡಿತರ ಚೀಟಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಅರ್ಹರಿಗೆ ಶೀಘ್ರವೇ ಹೊಸ ಪಡಿತರ ಚೀಟಿಗಳನ್ನು ವಿತರಿಸಲಾಗುವುದು. ಸಧ್ಯ ಹೊಸದಾಗಿ ಪಡಿತರ ಚೀಟಿಗೆ ಅರ್ಜಿಗಳನ್ನು ಆಹ್ವಾನಿಸಿಲ್ಲ ಎಂದು ತಿಳಿಸಿದ್ದಾರೆ.
2023ರ ಮಾರ್ಚ್ ಅಂತ್ಯದವರೆಗೆ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಂಡು ಅರ್ಹರಿಗೆ ಹೊಸ ಪಡಿತರ ಚೀಟಿ ವಿತರಿಸಬೇಕು. ಸರ್ಕಾರದ ಅನುಮತಿ ಪಡೆದ ನಂತರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅನ್ನ ಸುವಿಧಾ ಯೋಜನೆಯಲ್ಲಿ ಮನೆಗಳಿಗೆ ಆಹಾರ ಧಾನ್ಯ ತಲುಪಿಸಲು ಕ್ರಮ ಕೈಗೊಳ್ಳಲಾಗಿದ್ದು, ಎರಡು ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದೆ. 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮಾತ್ರ ಇರುವ ಮನೆಗಳಿಗೂ ಈ ಸೇವೆ ವಿಸ್ತರಿಸಬೇಕೆಂದು ತಿಳಿಸಿದ್ದಾರೆ.