ಬೆಂಗಳೂರು: ಪ್ರೌಢಶಾಲಾ ಶಿಕ್ಷಕರಿಗೆ ಪಿಯು ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡಿ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಿಸಲಾಗಿದೆ.
ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತೆ) ನಿಯಮಗಳು, 1957 ರ ನಿಯಮಗಳನ್ವಯ ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರ ಮಾಹಿತಿಯನ್ನು ವಿಭಾಗೀಯ ಕಚೇರಿಗಳಿಂದ ಪಡೆದು ಸ್ನಾತಕೋತ್ತರ ಪದವಿ ಪಡೆದಿರುವ ಪ್ರೌಢಶಾಲಾ ಸಹಶಿಕ್ಷಕರು ಗ್ರೇಡ್-2 ರವರ ರಾಜ್ಯ ಮಟ್ಟದ ಒಂದೇ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಸರ್ಕಾರಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಮಾತ್ರ ಅನ್ವಯವಾಗುವಂತೆ ಸರ್ಕಾರ ನೀಡಿದ ನಿರ್ದೇಶನದಂತೆ ಸಿದ್ದಪಡಿಸಿ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ನೃಪತುಂಗ ರಸ್ತೆ, ಬೆಂಗಳೂರು ಈ ಕಚೇರಿಯ ವೆಬ್ಸೈಟ್ www.schooleducation.karnataka.gov.in ನಲ್ಲಿ ಏಪ್ರಿಲ್, 25 ರಂದು ಪ್ರಕಟಿಸಲಾಗಿದೆ.
ಎಲ್ಲಾ ಶಿಕ್ಷಕರುಗಳು ರಾಜ್ಯ ಮಟ್ಟದ ಒಂದೇ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಕಚೇರಿಯ ವೆಬ್ಸೈಟ್ www.schooleducation.karnataka.gov.in ನಲ್ಲಿ ಪ್ರಕಟಿಸಲಾಗಿದ್ದು, ಕಂಪ್ಲೀಟ್ ಡಾಟಾ ಮತ್ತು ಇನ್ ಕಂಪ್ಲೀಟ್ ಡಾಟಾ ದಲ್ಲಿ ಸೇವಾ ವಿವರದ ಮಾಹಿತಿಯನ್ನು ಪರಿಶೀಲಿಸಿಕೊಂಡು ಈ ಮಾಹಿತಿ ಸರಿ ಇದೆ/ಇಲ್ಲ ಎಂಬುದನ್ನು ಪರಿಶೀಲಿಸಬೇಕು.
ಸರಿ ಇಲ್ಲದೇ ಇದ್ದಲ್ಲಿ ಇಲಾಖಾ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿ ಲಗತ್ತಿಸಿರುವ ಆಕ್ಷೇಪಣಾ ನಮೂನೆಯಂತೆ ಮಾಹಿತಿಯನ್ನು ಸಂಬಂಧಿಸಿದ ಸಹ ಶಿಕ್ಷಕರು ಮೇ, 08 ರವರೆಗೆ ಶಾಲಾ ಮುಖ್ಯ ಶಿಕ್ಷಕರಿಂದ ದೃಢೀಕರಿಸಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿಗದಿಪಡಿಸಿದ ವೇಳಾ ಪಟ್ಟಿಯಂತೆ ಆಕ್ಷೇಪಣೆಯನ್ನು ಪೂರಕ ದಾಖಲೆಗಳೊಂದಿಗೆ ಸಲ್ಲಿಸುವಂತೆ ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.