ರಾಯಚೂರು: ರಾಯಚೂರಿನಲ್ಲಿ ಸ್ನೇಹಿತರಿಂದಲೇ ಯುವಕನ ಬರ್ಬರ ಹತ್ಯೆ ನಡೆದಿದೆ. ಇಂದಿರಾನಗರದ ವೀರೇಶ್ ಅಲಿಯಾಸ್ ಪಂದಿ ವೀರೇಶ್(27) ಕೊಲೆಯಾದ ಯುವಕ.
ರಾಯಚೂರು ನಗರದ ರೈಲ್ವೆ ನಿಲ್ದಾಣದ ಮೈದಾನದಲ್ಲಿ ಘಟನೆ ನಡೆದಿದೆ. ತಲೆಯ ಮೇಲೆ ಕಲ್ಲು ಎತ್ತಿಹಾಕಿ ವೀರೇಶನನ್ನು ಹತ್ಯೆಗೈದು ಸ್ನೇಹಿತರು ಪರಾರಿಯಾಗಿದ್ದಾರೆ. ಏಪ್ರಿಲ್ 29ರಂದು ಮೃತ ವೀರೇಶ ಮನೆಯಿಂದ ನಾಪತ್ತೆಯಾಗಿದ್ದ. ಆತನು ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಕುಟುಂಬದವರು ಕಂಗಾಲಾಗಿದ್ದರು. ನಿನ್ನೆ ರಾತ್ರಿ ರೈಲ್ವೆ ಮೈದಾನದಲ್ಲಿ ವೀರೇಶನ ಮೃತ ದೇಹ ಪತ್ತೆಯಾಗಿದೆ.
ಪಲ್ಲವಿಯನ್ನು ಪ್ರೀತಿಸಿ ಮೃತ ವೀರೇಶ ಮದುವೆಯಾಗಿದ್ದ. ವೀರೇಶ್ ಪತ್ನಿ ಪಲ್ಲವಿ 7 ತಿಂಗಳ ಗರ್ಭಿಣಿಯಾಗಿದ್ದಾರೆ. ಏಪ್ರಿಲ್ 29 ರಂದು ಸ್ನೇಹಿತರ ಜೊತೆಗೆ ವೀರೇಶ ಪಾರ್ಟಿಗೆ ಹೋಗಿದ್ದ. ರೈಲ್ವೆ ಮೈದಾನದಲ್ಲಿ ಸ್ನೇಹಿತರ ಜೊತೆ ಪಾರ್ಟಿಯಲ್ಲಿ ಭಾಗವಹಿಸಿದ್ದ ವೇಳೆ ಕಿರಿಕ್ ಆಗಿ ಸ್ನೇಹಿತರಿಂದಲೇ ವೀರೇಶನ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಎಸ್ಪಿ ಪು ಟ್ಟಮಾದಯ್ಯ ಹಾಗೂ ಪಶ್ಚಿಮ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಯಚೂರಿನ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.