ಬೆಂಗಳೂರು: ವಾಣಿಜ್ಯ ವಾಹನಗಳ ಮೇಲಿನ ಮೋಟಾರು ವಾಹನ ತೆರಿಗೆ ಹೆಚ್ಚಳದ ಕರ್ನಾಟಕ ಮೋಟಾರ್ ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.
ಮೇ 1ರಿಂದ 10 ಲಕ್ಷ ರೂಪಾಯಿ ಒಳಗಿನ ವಾಣಿಜ್ಯ ವಾಹನ ಖರೀದಿಗೆ ತೆರಿಗೆ ಅನ್ವಯವಾಗುತ್ತದೆ. ಇನ್ನು ಮುಂದೆ ಇಂತಹ ವಾಹನ ಖರೀದಿ ವೇಳೆ ಜೀವಿತಾವಧಿ ತೆರಿಗೆ ಪಾವತಿಸಬೇಕಿದೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೆ ಬರೆ ಎಳೆದಂತಾಗಿದೆ.
ಇದುವರೆಗೆ 10 ಲಕ್ಷ ರೂಪಾಯಿಗಿಂತ ಕಡಿಮೆ ಮೌಲ್ಯದ ವಾಹನಕ್ಕೆ ಜೀವಿತಾವಧಿ ತೆರಿಗೆ ಇರಲಿಲ್ಲ. ಅದರ ಬದಲು ತ್ರೈಮಾಸಿಕವಾಗಿ ಪ್ರತಿ ಆಸನಕ್ಕೆ 100 ರೂಪಾಯಿಯಂತೆ 400 ರೂ. ನೀಡಬೇಕಿತ್ತು. ಈಗ ವಿಧಾನ ಮಂಡಲ ಅನುಮೋದಿಸಿದ ವಾಹನ ತೆರಿಗೆ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ನಾಳೆಯಿಂದ ರಾಜ್ಯದ ವಾಹನ ಮಾಲೀಕರಿಗೆ ತೆರಿಗೆ ಬಿಸಿ ತಟ್ಟಲಿದೆ. ಟ್ಯಾಕ್ಸಿ, ಲಘು ಗೂಡ್ಸ್ ವಾಹನಗಳು ದುಬಾರಿಯಾಗಲಿವೆ. 10 ಲಕ್ಷದೊಳಗಿನ ವಾಣಿಜ್ಯ ವಾಹನಗಳ ಬೆಲೆ ಹೆಚ್ಚಾಗಲಿದೆ.
ವಾಣಿಜ್ಯ ಉದ್ದೇಶ ಬಳಕೆಯ ಎಲೆಕ್ಟ್ರಿಕ್ ವಾಹನಗಳ ತೆರೆಗೆಯೂ ಏರಿಕೆಯಾಗಲಿದೆ. ಶೇಕಡ 10 ರಷ್ಟು ತೆರಿಗೆ ಏರಿಕೆಯಾಗಲಿದೆ. 25 ಲಕ್ಷಕ್ಕೂ ಹೆಚ್ಚಿನ ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ವಾಹನಗಳಿಗೆ ಶೇಕಡ 10 ತೆರಿಗೆ ವಿಧಿಸಲಾಗುವುದು. ಇದುವರೆಗೆ 10 ಲಕ್ಷಕ್ಕಿಂತ ಕಡಿಮೆ ಮೌಲ್ಯದ ವಾಹನಗಳಿಗೆ ತೆರಿಗೆ ಇರಲಿಲ್ಲ. ನಾಳೆಯಿಂದ ಎಲ್ಲಾ ವಾಹನಗಳ ಜೀವಿತಾವಧಿ ತೆರಿಗೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.