ಬೆಂಗಳೂರು: ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರ ಅಧಿಕಾರಾವಧಿಯನ್ನು 22 ದಿನಗಳಿಗೆ ವಿಸ್ತರಿಸಲಾಗಿದೆ. ಮುಂದಿನ ಡಿಜಿಪಿ ಆಯ್ಕೆಗೆ ಎಂಟು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರನ್ನು ಕೇಂದ್ರ ಲೋಕಸೇವಾ ಆಯೋಗಕ್ಕೆ ಶಿಫಾರಸು ಮಾಡಲಾಗಿದೆ.
ಅಲೋಕ್ ಮೋಹನ್ ಬುಧವಾರ ಏ. 30ರಂದು ಸೇವಾ ನಿವೃತ್ತರಾಗಬೇಕಿತ್ತು. ಆದರೆ, ಸುಪ್ರೀಂ ಕೋರ್ಟ್ ಆದೇಶ ಮಂದಿಟ್ಟು ಅವರಿಗೆ ಮೇ 21 ರವರೆಗೆ ಆಡಳಿತ ನಡೆಸಲು ಸರ್ಕಾರ ಅವಕಾಶ ನೀಡಿದೆ. ಈ ಮೂಲಕ ಅಧಿಕಾರ ವಿಸ್ತರಣೆಯಾದ ಮೊದಲ ಡಿಜಿ- ಐಜಿಪಿ ಎಂಬ ಚಾರಿತ್ರಿಕ ದಾಖಲೆಗೆ ಅಲೋಕ್ ಮೋಹನ್ ಪಾತ್ರರಾಗಿದ್ದಾರೆ.
ಗೃಹ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಜಿಪಿ ಅಧಿಕಾರ ವಿಸ್ತರಣೆಗೆ ಸಮ್ಮತಿಸಿದ್ದಾರೆ. ನಾಲ್ಕು ತಿಂಗಳು ಅಧಿಕಾರ ವಿಸ್ತರಣೆಗೆ ಆಲೋಕ್ ಮೋಹನ್ ಬಯಸಿದ್ದರು. ಆದರೆ, ಮೇ 21ರವರೆಗೆ ಅವರಿಗೆ ಅಧಿಕಾರ ವಿಸ್ತರಿಸಲಾಗಿದೆ.
ಸಿಐಡಿ ಡಿಜಿಪಿ ಡಾ.ಎಂ.ಎ. ಸಲೀಂ, ಅಗ್ನಿಶಾಮಕದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಕಾರಾಗೃಹ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ, ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್, ತರಬೇತಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಸೇರಿದಂತೆ 8 ಮಂದಿ ಹೆಸರನ್ನು ಡಿಜಿಪಿ ಹುದ್ದೆಗೆ ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗಿದೆ.