ಬೆಂಗಳೂರು: ರಾಜ್ಯದ 100 ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರ ಆಕಾಂಕ್ಷೆ ಮತ್ತು ಆಸಕ್ತಿಗೆ ಅನುಗುಣವಾಗಿ ಉದ್ಯೋಗ ಆಧಾರಿತ ಕೌಶಲ್ಯ ತರಬೇತಿ ನೀಡಲು ಸಾವಿತ್ರಿಬಾಯಿ ಪುಲೆ ಮಹಿಳಾ ಸಬಲೀಕರಣ ಯೋಜನೆ ಆರಂಭಿಸಲಾಗುವುದು.
29 ಜಿಲ್ಲೆಗಳಿಂದ ತಲಾ ಮೂರು ಗ್ರಾಮ ಪಂಚಾಯಿತಿಗಳಂತೆ ಒಟ್ಟು 87, ಬೆಳಗಾವಿ ಜಿಲ್ಲೆಯಲ್ಲಿ 7 ಮತ್ತು ತುಮಕೂರು ಜಿಲ್ಲೆಯ 6 ಗ್ರಾಮ ಪಂಚಾಯಿತಿ ಸೇರಿ ಒಟ್ಟು 100 ಗ್ರಾಮ ಪಂಚಾಯಿತಿಗಳಲ್ಲಿ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಜೀವನೋಪಾಯ ಇಲಾಖೆಯ ಸಹಯೋಗದಲ್ಲಿ ಸಾವಿತ್ರಿಬಾಯಿ ಪುಲೆ ಮಹಿಳಾ ಸಬಲೀಕರಣ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಹಿಳೆಯರಿಗೆ ಕೌಶಲ ಅಭಿವೃದ್ಧಿ ನಿಗಮ, ಸರ್ಕಾರೇತರ ಸಂಸ್ಥೆಗಳ ಮೂಲಕ ಸ್ವಉದ್ಯೋಗ ತರಬೇತಿ ನೀಡಲಾಗುವುದು. ಬ್ಯಾಂಕುಗಳೊಂದಿಗೆ ಸಂಪರ್ಕ ಏರ್ಪಡಿಸಿ 30,000 ಮಹಿಳೆಯರಿಗೆ ಸ್ವ ಉದ್ಯೋಗ ಆರಂಭಿಸಲು ಸಹಕಾರ ನೀಡಲಾಗುವುದು. ಪ್ರತಿ ತರಬೇತಿ ಕೇಂದ್ರದಿಂದ 300 ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೃಷಿಯಿಂದ ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗದೆ ಗ್ರಾಮೀಣ ಮಹಿಳೆಯರು ಆದಾಯ ಗಳಿಕೆಗೆ ಪರ್ಯಾಯ ವ್ಯವಸ್ಥೆ ಹುಡುಕುತ್ತಿದ್ದಾರೆ. ಅವರಿಗೆ ಉದ್ಯೋಗ ಒದಗಿಸಬಲ್ಲ ತರಬೇತಿ ಕೇಂದ್ರಗಳ ಕೊರತೆ ಇರುವುದರಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೌಶಲ ತರಬೇತಿ ಕೇಂದ್ರಗಳನ್ನು ಬಜೆಟ್ ಘೋಷಣೆಯಂತೆ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.