ಹಾವೇರಿ: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿಯೇತರ ಜಮೀನಿನಲ್ಲಿ ಅಭಿವೃದ್ಧಿಪಡಿಸಲಾಗಿದ್ದ ನಿವೇಶಗಳಿಗೆ ಇ- ಖಾತಾ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಪಿಡಿಒ ಸೇರಿ ಐವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಪಿಡಿಒ ಕೆ. ಮಂಜುನಾಥ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ತಿರಕಪ್ಪ ಬೂದಿಹಾಳ, ಸದಸ್ಯರಾದ ಸೋಮಶೇಖರಪ್ಪ, ಪ್ರಸನ್ನ ಬಣಕಾರ, ಸೈಯದ್ ರೆಹಮಾನ್ ಕರಜಗಿ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ರಾಣೇಬೆನ್ನೂರಿನ ನವೀನ ಮಲ್ಲೇಶಪ್ಪ ಅಂದನೂರು ಅವರು ಹಲಗೇರಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿಯೇತರ ಜಮೀನು ಅಭಿವೃದ್ಧಿಪಡಿಸಿದ್ದರು. ಒಟ್ಟು 124 ನಿಮಿಷಗಳ ಪೈಕಿ 60 ನಿವೇಶನಗಳಿಗೆ ಇ- ಖಾತಾ ಮಾಡಿಕೊಡಲು ಪಿಡಿಒ ಒಂದು ಲಕ್ಷ ರೂಪಾಯಿ ಲಂಚ ಪಡೆದಿದ್ದರು. ಉಳಿದ ನಿವೇಶನಗಳಿಗೆ ಉತಾರ ಮಾಡಿಕೊಡಲು 4.5 ಲಕ್ಷ ರೂಪಾಯಿ ನೀಡುವಂತೆ ಉಪಾಧ್ಯಕ್ಷ ಮತ್ತು ಸದಸ್ಯರು ಬೇಡಿಕೆ ಇಟ್ಟಿದ್ದು, ನಂತರ ನಾಲ್ಕು ಲಕ್ಷ ರೂಪಾಯಿಗೆ ಆರೋಪಿಗಳು ಒಪ್ಪಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಹಾವೇರಿ ಲೋಕಾಯುಕ್ತ ಡಿವೈಎಸ್ಪಿ ಸಿ. ಮಧುಸೂದನ್, ತನಿಖಾಧಿಕಾರಿ ಬಸವರಾಜ ಹಳಬಣ್ಣನವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.