ಬೆಂಗಳೂರು: ಜಾತಿ ನಿಂದನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಫೋಸಿಸ್ ಸಹ ಸಂಸ್ಥಾಪಕ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ(IISC) ಆಡಳಿತ ಮಂಡಳಿಯ ಅಧ್ಯಕ್ಷ ಸೇನಾಪತಿ ಕ್ರಿಸ್ ಗೋಪಾಲಕೃಷ್ಣನ್ ಮತ್ತು, ಭಾರತೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಗೋವಿಂದನ್ ರಂಗರಾಜನ್ ಸೇರಿ ಒಟ್ಟು 16 ಜನರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ.
ಗೋವಿಂದನ್ ರಂಗರಾಜನ್ ಸೇರಿದಂತೆ 16 ಜನ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ ಅವರಿದ್ದ ಏಕಸದಸ್ಯ ಪೀಠ ಈ ಕುರಿತು ತೀರ್ಪು ನೀಡಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಸುಸ್ಥಿರ ತಂತ್ರಜ್ಞಾನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದ ಭೋವಿ ಸಮುದಾಯದ ದೂರುದಾರ ಡಿ. ಸಣ್ಣದುರ್ಗಪ್ಪ ಅವರನ್ನು ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಸೇವೆಯಿಂದ ವಜಾ ಮಾಡಲಾಗಿತ್ತು. ನಂತರ ಅದನ್ನು ರಾಜೀನಾಮೆ ರೂಪಕ್ಕೆ ಪರಿವರ್ತಿಸಲಾಗಿತ್ತು. ಜಾತಿ ತಾರತಮ್ಯ ನಡೆಸುವ ಮೂಲಕ ನನ್ನನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಆರೋಪಿಸಿ ಸಣ್ಣದುರ್ಗಪ್ಪ ಅರ್ಜಿದಾರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದರು.
ಪ್ರಕರಣ ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಗೆ ಮನವಿ ಮಾಡಿದ್ದರು. ಪ್ರತಿವಾದಿ ಸಣ್ಣದುರ್ಗಪ್ಪ ಅವರನ್ನು ಸೇವೆಯಿಂದ ವಜಾ ಮಾಡಿದ ಕ್ರಮ ಮತ್ತು ಅದನ್ನು ರಾಜೀನಾಮೆಯಾಗಿ ಪರಿವರ್ತಿಸಿ ಪರಿಗಣಿಸಿರುವುದು ಸಿವಿಲ್ ಪ್ರಕ್ರಿಯೆಯಾಗಿದೆ. ಇಂತಹುದರ ಕುರಿತು ಕ್ರಿಮಿನಲ್ ಆರೋಪದಡಿ ದೂರು ದಾಖಲಿಸುವುದು ಸಾಧ್ಯವಿಲ್ಲ. ಇದು ಅರ್ಜಿದಾರರಿಗೆ ಕಿರುಕುಳ ನೀಡುವ ದುರುದ್ದೇಶಪೂರಿತ ಪ್ರಯತ್ನ. ಆದ್ದರಿಂದ ದೂರನ್ನು ವಜಾಗೊಳಿಸಲಾಗುತ್ತದೆ ಎಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಹೇಳಿದೆ.