ಬೆಳಗಾವಿ: ನಿಮ್ಮ ಪಕ್ಷದ ಕಾರ್ಯಕರ್ತರಿಗೆ ನೀವೇ ಬುದ್ಧಿವಾದ ಹೇಳಿ, ಸರಿಪಡಿಸಬೇಕು. ಇಲ್ಲದಿದ್ದರೆ ನೀವು ಎಲ್ಲಿಯೂ ಕಾರ್ಯಕ್ರಮ ಮಾಡಲು ಬಿಡುವುದಿಲ್ಲ. ಎಲ್ಲ ರೀತಿಯ ಪ್ರತಿಹೋರಾಟಕ್ಕೆ ನಾವೂ ಸಿದ್ಧರಿದ್ದೇವೆ ಎಂದು ಬಿಜೆಪಿ ನಾಯಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಮಾವೇಶಕ್ಕೆ ನುಗ್ಗಿ ಸಿಎಂ ಭಾಷಣಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿ ಪಡಿಸಿ ಗಲಾಟೆ ಮಾಡಿದ್ದನ್ನು ಖಂಡಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಾನು ಮನವಿ ಮಾಡಿಕೊಳ್ಳುತ್ತಿಲ್ಲ. ಇದು ಬಿಜೆಪಿಯವರಿಗೆ ನಾನು ನೀಡುತ್ತಿರುವ ಎಚ್ಚರಿಕೆ. ಅವರೇ ಅವರ ಕಾರ್ಯಕರ್ತರಿಗೆ ಬುದ್ಧಿ ಹೇಳಿ ಸರಿ ಮಾಡಲಿ. ಇಲ್ಲವಾದಲ್ಲಿ ಬಿಜೆಪಿಯವರು ಒಂದೇ ಒಂದು ಕಾರ್ಯಕ್ರಮ ಮಾಡಲು ಬಿಡಲ್ಲ ಎಂದು ಗುಡುಗಿದರು.
ಇದೇ ಮೊದಲ ಬಾರಿ ಬಿಜೆಪಿಯವರು ನಾಲ್ಕು ಜನರ ಕಾರ್ಯಕರ್ತರನ್ನು ಕಳಿಸಿ ಕೊಟ್ಟಿದ್ದಾರೆ. ನಮ್ಮ ಪ್ರತಿಭಟನೆ ಕಾರ್ಡ್ ಇಟ್ಟುಕೊಂಡು ಕಪ್ಪು ಬಾವುಟ ಪ್ರದರ್ಶಿಸಿ, ಕೂಗಾಟ ಮಾಡಿ ಗದ್ದಲ ಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಇದು ಸರಿಯಲ್ಲ. ಈ ಪ್ರವೃತ್ತಿ ಮುಂದುವರಿಸಿದರೆ ಇಡೀ ರಾಜ್ಯದಲ್ಲಿ ಒಂದು ಸಭೆಯನ್ನೂ ಮಾಡಲು ಬಿಜೆಪಿಯವರಿಗೆ ಬಿಡುವುದಿಲ್ಲ. ಇದು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದು ಅಬ್ಬರಿಸಿದರು.
ಇದೇ ರೀತಿ ದುರ್ವರ್ತನೆ ಮುಂದುವರಿಸಿದರೆ ನಿಮ್ಮ ವಿರುದ್ಧ ನಿಮಗಿಂತ ಜಾಸ್ತಿ ಹೋರಾಟ ಕಾರ್ಯರೂಪಕ್ಕೆ ತರುವ ಶಕ್ತಿಯನ್ನು ಭಗವಂತ ಮತ್ತು ರಾಜ್ಯದ ಜನತೆ ನನಗೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.