BIG NEWS : ಪ್ರಧಾನಿ ಮೋದಿ ‘ಮನ್ ಕಿ ಬಾತ್’ – 121ನೇ ಸಂಚಿಕೆ : ಇಲ್ಲಿದೆ ಕನ್ನಡ ಅವತರಣಿಕೆಯ ಮುಖ್ಯಾಂಶಗಳು |Mann Ki Batt

ನವದೆಹಲಿ : ಪ್ರಧಾನಿ ಮೋದಿ ‘ಮನ್ ಕಿ ಬಾತ್’ – 121ನೇ ಸಂಚಿಕೆಯನ್ನು ನಿನ್ನೆ ಏ.27 ರಂದು ನಡೆಸಿರುತ್ತಾರೆ. ಮನ್ ಕಿ ಬಾತ್ ನಲ್ಲಿ ಪ್ರಧಾನಿ ಹೇಳಿದ್ದೇನು..? ಹೀಗಿದೆ ಸಂಚಿಕೆಯ ಮುಖ್ಯಾಂಶಗಳು.!

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಇಂದು ನಿಮ್ಮೊಂದಿಗೆ ನಾನು ‘ಮನದ ಮಾತು’ ಆಡುತ್ತಿರುವಾಗ, ನನ್ನ ಹೃದಯ ನೋವಿನಿಂದ ಭಾರವಾಗಿದೆ. ಪಹಲ್ಲಾಮ್ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ಘಟನೆ ದೇಶದ ಪ್ರತಿಯೊಬ್ಬ ನಾಗರಿಕನನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ. ಸಂತ್ರಸ್ತ ಕುಟುಂಬಗಳ ಬಗ್ಗೆ ಪ್ರತಿ ಭಾರತೀಯನಲ್ಲೂ ಅಪಾರ ಸಹಾನುಭೂತಿಯಿದೆ. ರಾಜ್ಯ, ಭಾಷೆಯನ್ನು ಮೀರಿ ಎಲ್ಲ ಜನರು ಈ ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವನ್ನು ಸ್ವತಃ ಅನುಭವಿಸುತ್ತಿದ್ದಾರೆ. ಭಯೋತ್ಪಾದಕ ದಾಳಿಯ ಚಿತ್ರಗಳನ್ನು ನೋಡಿದ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ ಎಂದು ನನಗೆ ಅನಿಸುತ್ತದೆ. ಪಹಲ್ಲಾಮ್ನಲ್ಲಿ ನಡೆದ ಈ ದಾಳಿಯು ಭಯೋತ್ಪಾದನೆಗೆ ಉತ್ತೇಜನ ನೀಡುವವರ ಹತಾಶೆಯನ್ನು ತೋರಿಸುತ್ತದೆ ಮತ್ತು ಅವರ ಹೇಡಿತನವನ್ನು ಪ್ರದರ್ಶಿಸುತ್ತದೆ. ಶಾಲಾ ಕಾಲೇಜುಗಳಲ್ಲಿ ಹುರುಪು ತುಂಬಿರುವಂತಹ ಕಾಲದಲ್ಲಿ ನಿರ್ಮಾಣ ಕಾರ್ಯಗಳು ಅಭೂತಪೂರ್ವ ವೇಗವನ್ನು ಪಡೆದುಕೊಂಡಿರುವಾಗ, ಕಾಶ್ಮೀರದಲ್ಲಿ ಶಾಂತಿ ಮರುಕಳಿಸುತ್ತಿರುವ ಇಂತಹ ಸಮಯದಲ್ಲಿ ಪ್ರಜಾಪ್ರಭುತ್ವ ಬಲಿಷ್ಠಗೊಳ್ಳುತ್ತಿರುವಾಗ, ಪ್ರವಾಸಿಗರ ಸಂಖ್ಯೆಯಲ್ಲಿ ದಾಖಲೆಯ ಏರಿಕೆ ಕಂಡುಬರುತ್ತಿರುವಾಗ, ಜನರ ಆದಾಯ ಹೆಚ್ಚುತ್ತಿರುವಾಗ, ಯುವಕರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿದ್ದಾಗ, ದೇಶದ ಶತ್ರುಗಳು, ಜಮ್ಮು ಮತ್ತು ಕಾಶ್ಮೀರದ ವೈರಿಗಳಿಗೆ ಇದನ್ನು ಸಹಿಸಲಾಗಲಿಲ್ಲ ಭಯೋತ್ಪಾದಕರು ಮತ್ತಷ್ಟು ಭಯೋತ್ಪಾದನೆ ಹೆಚ್ಚಿಸಲು ಬಯಸುತ್ತಿದ್ದಾರೆ. ಕಾಶ್ಮೀರವನ್ನು ಮತ್ತೆ ನಾಶಮಾಡಲು ಹುನ್ನಾರದಿಂದ ಇಷ್ಟು ದೊಡ್ಡ ಘಟನೆ ನಡೆಯುವಂತೆ ಪಿತೂರಿ ನಡೆಸಿದರು.

ದೇಶದ ಏಕತೆ, 140 ಕೋಟಿ ಭಾರತೀಯರ ಒಗ್ಗಟ್ಟು, ಭಯೋತ್ಪಾದನೆಯ ವಿರುದ್ಧದ ಈ ಯುದ್ಧದಲ್ಲಿ ನಮ್ಮ ದೊಡ್ಡ ಶಕ್ತಿಯಾಗಿದೆ. ಈ ಒಗ್ಗಟ್ಟೆ ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದಲ್ಲಿ ನಿರ್ಣಾಯಕ ಪಾತ್ರವಾಹಿಸಲಿದೆ. ದೇಶ ಎದುರಿಸುತ್ತಿರುವ ಈ ಸವಾಲನ್ನು ಎದುರಿಸಲು ನಾವು ನಮ್ಮ ಸಂಕಲ್ಪವನ್ನು ಬಲಪಡಿಸಿಕೊಳ್ಳಬೇಕು. ಒಂದು ರಾಷ್ಟ್ರ ರೂಪದಲ್ಲಿ ಬಲವಾದ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಈ ಭಯೋತ್ಪಾದಕ ದಾಳಿಯ ನಂತರ ಸಂಪೂರ್ಣ ದೇಶ ಒಕ್ಕೊರಲಿನಿಂದ ಧ್ವನಿಯೆತ್ತಿರುವುದನ್ನು ಇಂದು ಜಗತ್ತೇ ನೋಡುತ್ತಿದೆ.

ಸ್ನೇಹಿತರೇ, ಭಾರತೀಯರಾಗಿ ನಮ್ಮಲ್ಲಿ ಹುದುಗಿದ ಈ ಆಕ್ರೋಶ ಪ್ರಪಂಚದಾದ್ಯಂತ ವ್ಯಕ್ತವಾಗುತ್ತಿದೆ. ಭಯೋತ್ಪಾದಕ ದಾಳಿಯ ನಂತರ, ಜಗತ್ತಿನ ಮೂಲೆಮೂಲೆಯಿಂದ ಸಂತಾಪ ವ್ಯಕ್ತವಾಗುತ್ತಿದೆ. ಜಾಗತಿಕ ನಾಯಕರು ನನಗೆ ಕರೆ ಮಾಡಿದ್ದಾರೆ. ಪತ್ರ ಬರೆದಿದ್ದಾರೆ ಮತ್ತು ಸಂದೇಶಗಳನ್ನು ಕಳುಹಿಸಿದ್ದಾರೆ. ಈ ಘೋರ ಭಯೋತ್ಪಾದಕ ದಾಳಿಯನ್ನು ಎಲ್ಲರೂ ಬಲವಾಗಿ ಖಂಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಅವರು ಸಂತಾಪ ಸೂಚಿಸಿದ್ದಾರೆ. ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟದಲ್ಲಿ ಇಡೀ ಜಗತ್ತು 140 ಕೋಟಿ ಭಾರತೀಯರೊಂದಿಗೆ ನಿಂತಿದೆ. ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಗುತ್ತದೆ, ಖಂಡಿತವಾಗಿಯೂ ನ್ಯಾಯ ಸಿಕ್ಕೆ ತೀರುತ್ತದೆ ಎಂದು ನಾನು ಮತ್ತೊಮ್ಮೆ ಭರವಸೆ ನೀಡುತ್ತೇನೆ.. ಈ ದಾಳಿಯ ಅಪರಾಧಿಗಳು ಮತ್ತು ಸಂಚುಕೋರರಿಗೆ ಕಠಿಣ ಉತ್ತರ ನೀಡಲಾಗುವುದು.

ಸ್ನೇಹಿತರೇ, ಎರಡು ದಿನಗಳ ಹಿಂದೆ ನಮ್ಮ ದೇಶದ ಮಹಾನ್ ವಿಜ್ಞಾನಿ ಡಾ. ಕೆ. ಕಸ್ತೂರಿರಂಗನ್ ಅವರನ್ನು ನಾವು ಕಳೆದುಕೊಂಡೆವು. ಕಸ್ತೂರಿರಂಗನ್ ಅವರನ್ನು ಭೇಟಿಯಾದಾಗಲೆಲ್ಲಾ ಭಾರತದ ಯುವಜನರ ಪ್ರತಿಭೆ, ಆಧುನಿಕ ಶಿಕ್ಷಣ, ಬಾಹ್ಯಾಕಾಶ ವಿಜ್ಞಾನ ಮುಂತಾದ ವಿಷಯಗಳ ಕುರಿತು ನಾವು ಸಾಕಷ್ಟು ಚರ್ಚಿಸುತ್ತಿದ್ದೆವು. ವಿಜ್ಞಾನ, ಶಿಕ್ಷಣ ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಕೊಡುಗೆ ಸದಾ ಸ್ಮರಣೀಯ. ಅವರ ನೇತೃತ್ವದಲ್ಲಿ ಇಸ್ರೋಗೆ ಹೊಸ ಸ್ಥಾನಮಾನ ದೊರೆಯಿತು. ಅವರ ಮಾರ್ಗದರ್ಶನದಲ್ಲಿ ಮುಂದುವರೆದ ಬಾಹ್ಯಾಕಾಶ ಕಾರ್ಯಕ್ರಮಗಳು ಭಾರತದ ಪ್ರಯತ್ನಗಳಿಗೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟವು. ಭಾರತ ಇಂದು ಬಳಸುವ ಅನೇಕ ಉಪಗ್ರಹಗಳನ್ನು ಡಾ. ಕಸ್ತೂರಿರಂಗನ್ ಅವರ ಮೇಲ್ವಿಚಾರಣೆಯಲ್ಲಿ ಉಡಾವಣೆ ಮಾಡಲಾಗಿದೆ. ಅವರ ವ್ಯಕ್ತಿತ್ವದಲ್ಲಿ ಮತ್ತೊಂದು ವಿಶೇಷತೆಯಿತ್ತು, ಯುವ ಪೀಳಿಗೆ ಅವರಿಂದ ಬಹಳಷ್ಟು ಕಲಿಯಬಹುದು. ಅವರು ನಾವೀನ್ಯತೆಗೆ ಬಹಳ ಪ್ರಾಮುಖ್ಯತೆ ನೀಡುತ್ತಿದ್ದರು. ಹೊಸದನ್ನು ಕಲಿಯುವ, ತಿಳಿದುಕೊಳ್ಳುವ ಮತ್ತು ಕಾರ್ಯರೂಪಕ್ಕೆ ತರುವ ಅವರ ದೃಷ್ಟಿಕೋನವು ತುಂಬಾ ಸ್ಫೂರ್ತಿದಾಯಕ. ದೇಶದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಿದ್ಧಪಡಿಸುವಲ್ಲಿ ಡಾ. ಕೆ. ಕಸ್ತೂರಿರಂಗನ್ ಅವರು ಬಹು ದೊಡ್ಡ ಪಾತ್ರವಹಿಸಿದ್ದರು. 21 ನೇ ಶತಮಾನದ ಆಧುನಿಕ ಅಗತ್ಯಗಳಿಗೆ ಅನುಗುಣವಾಗಿ ಭವಿಷ್ಯತ್ತನ್ನು ನೋಡುವ ಶಿಕ್ಷಣದ ಕಲ್ಪನೆಯನ್ನು ಡಾ. ಕಸ್ತೂರಿರಂಗನ್ ಮಂಡಿಸಿದರು. ದೇಶಕ್ಕೆ ಅವರ ನಿಸ್ವಾರ್ಥ ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವರ ಕೊಡುಗೆ ಸದಾ ಸ್ಮರಣೀಯ. ನಾನು ಡಾ. ಕೆ. ಕಸ್ತೂರಿರಂಗನ್ ಅವರಿಗೆ ವಿನಮ್ರತೆಯಿಂದ ಗೌರವ ಸಮರ್ಪಿಸುತ್ತೇನೆ.

ನನ್ನ ಪ್ರಿಯ ದೇಶವಾಸಿಗಳೇ, ಈ ಏಪ್ರಿಲ್ ತಿಂಗಳಿಗೆ ಆರ್ಯಭಟ ಉಪಗ್ರಹ ಉಡಾವಣೆಗೊಂಡು 50 ವರ್ಷಗಳು ತುಂಬಿವೆ. ನಾವು ಇಂದು ಹಿಂತಿರುಗಿ ನೋಡಿದಾಗ, 50 ವರ್ಷಗಳ ಈ ಪ್ರಯಾಣವನ್ನು ನೆನಪಿಸಿಕೊಳ್ಳುವಾಗ, ಎಷ್ಟು ಸುದೀರ್ಘ ಮಾರ್ಗ ಕ್ರಮಿಸಿದ್ದೇವೆಂದು ನಮಗೆ ಅರಿವಾಗುತ್ತದೆ. ಭಾರತದ ಬಾಹ್ಯಾಕಾಶ ಕನಸುಗಳ ಈ ಹಾರಾಟವು ಒಮ್ಮೆ ಕೇವಲ ಧೈರ್ಯ ಮಾತ್ರದಿಂದ ಆರಂಭಗೊಂಡಿತ್ತು. ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ಉತ್ಸಾಹ ಹೊಂದಿದ್ದ ಕೆಲವು ಯುವ ವಿಜ್ಞಾನಿಗಳ ಸಾಧನೆ ಇದಾಗಿದೆ ಇಂದಿನಂತೆ ಅವರ ಬಳಿ ಆಧುನಿಕ ಸಂಪನ್ಮೂಲಗಳಿರಲಿಲ್ಲ. ಜಾಗತಿಕ ತಂತ್ರಜ್ಞಾನವೂ ಕೈಗೆಟುಕುವಂತಿರಲಿಲ್ಲ – ಅವರ ಬಳಿ ಏನಾದರೂ ಇಟ್ಟು ಎಂದರೆ, ಅದು ಪ್ರತಿಭೆ, ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ಹಂಬಲ ಮಾತ್ರ. ನಮ್ಮ ವಿಜ್ಞಾನಿಗಳು ಎತ್ತಿನ ಬಂಡಿಗಳು ಮತ್ತು ಸೈಕಲ್ಗಳ ಮೇಲೆ ಅತ್ಯಂತ ಪ್ರಮುಖ ಉಪಕರಣಗಳನ್ನು ಹೊತ್ತೊಯ್ಯುವ ಚಿತ್ರಗಳನ್ನು ಸಹ ನೀವು ನೋಡಿರಬಹುದು. ಆ ಸಮರ್ಪಣೆ ಮತ್ತು ರಾಷ್ಟ್ರ ಸೇವಾ ಮನೋಭಾವದಿಂದಾಗಿ ಇಂದು ಬಹಳಷ್ಟು ಬದಲಾವಣೆಗಳಾಗಿವೆ. ಇಂದು ಭಾರತ ಜಾಗತಿಕ ಬಾಹ್ಯಾಕಾಶ ಶಕ್ತಿಯಾಗಿ ಬೆಳೆದಿದೆ. ನಾವು ಏಕಕಾಲದಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ದಾಖಲೆಯನ್ನು ಸೃಷ್ಟಿಸಿದ್ದೇವೆ. ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಪ್ರಥಮ ರಾಷ್ಟ್ರವಾಗಿ ಹೊರಹೊಮ್ಮಿದ್ದೇವೆ. ಭಾರತವು ಮಂಗಳ ಕಕ್ಷೆಯ ಮಿಷನ್ ಅನ್ನು ಪ್ರಾರಂಭಿಸಿದೆ, ಅಲ್ಲದೆ ಆದಿತ್ಯ- L1 ಮಿಷನ್ ಮೂಲಕ ನಾವು ಸೂರ್ಯನಿಗೆ ಬಹಳ ಹತ್ತಿರ ತಲುಪಿದ್ದೇವೆ. ಇಂದು ಭಾರತವು ಇಡೀ ವಿಶ್ವದಲ್ಲೇ ಅತ್ಯಂತ ಕಾಸ್ಟ್ ಎಫೆಕ್ಟಿವ್ ಆದರೆ ಯಶಸ್ವಿ ಬಾಹ್ಯಾಕಾಶ ಕಾರ್ಯಕ್ರಮವನ್ನು ಮುನ್ನಡೆಸುತ್ತಿದೆ. ಪ್ರಪಂಚದ ಅನೇಕ ದೇಶಗಳು ತಮ್ಮ ಉಪಗ್ರಹಗಳು ಮತ್ತು ಬಾಹ್ಯಾಕಾಶ ಯಾತ್ರೆಗಳಿಗೆ ಇಸ್ರೋದಿಂದ ಸಹಾಯ ಪಡೆಯುತ್ತಿವೆ.

ಸ್ನೇಹಿತರೇ, ಇಸ್ರೋ ಮೂಲಕ ಉಪಗ್ರಹ ಉಡಾವಣೆ ಮಾಡುವುದನ್ನು ನೋಡಿದಾಗ ನಮಗೆ ಹೆಮ್ಮೆಯಾಗುತ್ತದೆ. 2014 ರಲ್ಲಿ ಪಿಎಸ್ಎಲ್ವಿ-ಸಿ-23 ಉಡಾವಣೆಯನ್ನು ವೀಕ್ಷಿಸಿದಾಗ ನನಗೂ ಇದೇ ರೀತಿಯ ಅನುಭವವಾಯಿತು. 2019 ರಲ್ಲಿ ಚಂದ್ರಯಾನ-2 ಲ್ಯಾಂಡಿಂಗ್ ಸಮಯದಲ್ಲಿಯೂ, ನಾನು ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿದ್ದೆ. ಆಗ ಚಂದ್ರಯಾನ ನಿರೀಕ್ಷಿತ ಯಶಸ್ಸನ್ನು ಪಡೆಯಲಿಲ್ಲ, ವಿಜ್ಞಾನಿಗಳಿಗೆ ಅದು ತುಂಬಾ ಕಠಿಣ ಘಳಿಗೆಯೆನಿಸಿತ್ತು. ಆದರೆ, ವಿಜ್ಞಾನಿಗಳ ಧೈರ್ಯ ಮತ್ತು ಏನನ್ನಾದರೂ ಸಾಧಿಸುವ ಉತ್ಸಾಹವನ್ನು ನಾನು ಸ್ವತಃ ವೀಕ್ಷಿಸುತ್ತಿದ್ದೆ. ಕೆಲವು ವರ್ಷಗಳ ನಂತರ, ಅದೇ ವಿಜ್ಞಾನಿಗಳು ಚಂದ್ರಯಾನ -3 ಅನ್ನು ಹೇಗೆ ಯಶಸ್ವಿಗೊಳಿಸಿದರು ಎಂಬುದನ್ನು ಇಡೀ ಜಗತ್ತು ನೋಡಿತು.

ಸ್ನೇಹಿತರೇ, ಈಗ ಭಾರತ ತನ್ನ ಬಾಹ್ಯಾಕಾಶ ವಲಯವನ್ನು ಖಾಸಗಿ ವಲಯಕ್ಕೂ ಮುಕ್ತಗೊಳಿಸಿದೆ. ಇಂದು ಅನೇಕ ಯುವಕರು ಸ್ಪೇಸ್ ಸ್ಟಾರ್ಟ್ ಅಪ್ನಲ್ಲಿ ಹೊಸ ಸಾಧನೆಗೆ ಮುನ್ನುಡಿ ಬರೆಯುತ್ತಿದ್ದಾರೆ. 10 ವರ್ಷಗಳ ಹಿಂದೆ ಈ ಕ್ಷೇತ್ರದಲ್ಲಿ ಕೇವಲ ಒಂದೇ ಒಂದು ಕಂಪನಿ ಇತ್ತು, ಆದರೆ ಇಂದು ದೇಶದಲ್ಲಿ ಮುನ್ನೂರ ಇಪ್ಪತ್ತೈದಕ್ಕೂ ಹೆಚ್ಚು ಸ್ಪೇಸ್ ಸ್ಟಾರ್ಟ್ ಅಪ್ಗಳು ಕಾರ್ಯನಿರ್ವಹಿಸುತ್ತಿವೆ. ಮುಂಬರುವ ದಿನಗಳಲ್ಲಿ ಬಾಹ್ಯಾಕಾಶ ಕ್ಷೇತ್ರ ಹೊಸ ಹೊಸ ಅವಕಾಶಗಳಿಗೆ ತೆರೆದುಕೊಳ್ಳಲಿದೆ. ಭಾರತ ಹೊಸ ಎತ್ತರಕ್ಕೆ ಏರಲಿದೆ. ದೇಶವು ಗಗನಯಾನ, ಸ್ಟಾಡೆಕ್ಸ್ ಮತ್ತು ಚಂದ್ರಯಾನ -4 ನಂತಹ ಹಲವು ಪ್ರಮುಖ ಯೋಜನೆಗಳ ಸಿದ್ಧತೆಯಲ್ಲಿ ತೊಡಗಿದೆ. ನಾವು ವೀನಸ್ ಆರ್ಬಿಟರ್ ಮಿಷನ್ ಮತ್ತು ಮಾರ್ಸ್ ಲ್ಯಾಂಡರ್ ಮಿಷನ್ನಲ್ಲೂ ಕೆಲಸ ಮಾಡುತ್ತಿದ್ದೇವೆ. ನಮ್ಮ ಬಾಹ್ಯಾಕಾಶ ವಿಜ್ಞಾನಿಗಳು ತಮ್ಮ ನಾವೀನ್ಯತೆಗಳಿಂದ ದೇಶವಾಸಿಗಳು ಮತ್ತಷ್ಟು ಹೆಮ್ಮೆಪಡುವಂತೆ ಮಾಡಲಿದ್ದಾರೆ.

ಸ್ನೇಹಿತರೇ, ಕಳೆದ ತಿಂಗಳು ಮ್ಯಾನ್ಮಾರ್ನಲ್ಲಿ ಸಂಭವಿಸಿದ ಭೂಕಂಪದ ಭಯಾನಕ ಚಿತ್ರಗಳನ್ನು ನೀವು ನೋಡಿರಬಹುದು. ಭೂಕಂಪದಿಂದಾಗಿ ಅಲ್ಲಿ ಭಾರಿ ವಿನಾಶ ಉಂಟಾಯಿತು; ಅವಶೇಷಗಳಲ್ಲಿ ಸಿಲುಕಿದ್ದ ಜನರಿಗೆ ಪ್ರತಿ ಉಸಿರು, ಪ್ರತಿ ಕ್ಷಣವೂ ಅಮೂಲ್ಯವಾಗಿತ್ತು. ಅದಕ್ಕಾಗಿಯೇ ಭಾರತವು ಮ್ಯಾನ್ಮಾರ್ನಲ್ಲಿರುವ ನಮ್ಮ ಸಹೋದರ ಸಹೋದರಿಯರಿಗಾಗಿ ಆಪರೇಷನ್ ಬ್ರಹ್ಮವನ್ನು ತಕ್ಷಣವೇ ಪ್ರಾರಂಭಿಸಿತು. ವಾಯುಪಡೆಯ ವಿಮಾನಗಳಿಂದ ಹಿಡಿದು ನೌಕಾಪಡೆಯ ಹಡಗುಗಳವರೆಗೆ ಎಲ್ಲವನ್ನೂ ಮ್ಯಾನ್ಮಾರ್ಗೆ ಸಹಾಯ ಮಾಡಲು ಕಳುಹಿಸಲಾಯಿತು. ಅಲ್ಲಿ ಭಾರತೀಯ ತಂಡವು ಒಂದು ಫೀಲ್ಡ್ ಹಾಸ್ಪಿಟಲ್ ಸಿದ್ಧಪಡಿಸಿತು. ಪ್ರಮುಖ ಕಟ್ಟಡಗಳು ಮತ್ತು ಮೂಲಸೌಕರ್ಯಗಳಿಗೆ ಆಗಿರುವ ಹಾನಿಯ ಮೌಲ್ಯಮಾಪನದಲ್ಲಿ ಎಂಜಿನಿಯರ್ಗಳ ತಂಡವು ಸಹಾಯ ಮಾಡಿತು. ಭಾರತೀಯ ತಂಡವು ಅಲ್ಲಿಗೆ ಕಂಬಳಿಗಳು, ಡೇರೆಗಳು, ಹಾಸಿಗೆ, ಔಷಧಿಗಳು, ಆಹಾರ ಪದಾರ್ಥಗಳು ಮತ್ತು ಇತರ ಅನೇಕ ವಸ್ತುಗಳನ್ನು ಪೂರೈಸಿತು. ಈ ಸಮಯದಲ್ಲಿ, ಭಾರತೀಯ ತಂಡಕ್ಕೆ ಅಲ್ಲಿನ ಜನರಿಂದ ಸಾಕಷ್ಟು ಪ್ರಶಂಸೆ ಲಭಿಸಿತು.

ಸ್ನೇಹಿತರೇ, ಈ ಬಿಕ್ಕಟ್ಟಿನಲ್ಲಿ, ಧೈರ್ಯ, ತಾಳ್ಮೆ ಮತ್ತು ಬುದ್ದಿವಂತಿಕೆಯ ಅನೇಕ ಹೃದಯಸ್ಪರ್ಶಿ ಉದಾಹರಣೆಗಳು ಬೆಳಕಿಗೆ ಬಂದವು. 18 ಗಂಟೆಗಳ ಕಾಲ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 70 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧ ಮಹಿಳೆಯನ್ನು ಭಾರತೀಯ ತಂಡ ರಕ್ಷಿಸಿತು. ಈಗ ಟಿವಿಯಲ್ಲಿ ‘ಮನದ ಮಾತು’ ನೋಡುತ್ತಿರುವ ವೀಕ್ಷಕರು ಆ ವೃದ್ಧ ಮಹಿಳೆಯ ಮುಖವನ್ನೂ ನೋಡುತ್ತಿರಬೇಕು. ಭಾರತದ ತಂಡವು ಅವರ ಆಮ್ಲಜನಕದ ಮಟ್ಟವನ್ನು ಸ್ಥಿರಗೊಳಿಸುವುದರಿಂದ ಹಿಡಿದು ಫ್ರಾಕ್ಟರ್ ಚಿಕಿತ್ಸೆ ಒದಗಿಸುವವರೆಗೆ ಸಾಧ್ಯವಿರುವ ಎಲ್ಲ ಚಿಕಿತ್ಸೆಯನ್ನು ಒದಗಿಸಿತು. ಈ ವೃದ್ಧ ಮಹಿಳೆ ಆಸ್ಪತ್ರೆಯಿಂದ ಬಿಡುಗಡೆಯಾದಾಗ, ಅವರು ನಮ್ಮ ತಂಡಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಭಾರತೀಯ ರಕ್ಷಣಾ ತಂಡದಿಂದಾಗಿ ತನಗೆ ಹೊಸ ಜೀವನ ಲಭಿಸಿತು ಎಂದು ಅವರು ಹೇಳಿದರು. ಈ ತಂಡದ ಸಹಾಯದಿಂದಲೇ ಬಹಳಷ್ಟು ಜನರು ತಮ್ಮ ಸ್ನೇಹಿತರು ಮತ್ತು ಸಂಬಂಧಿಕರನ್ನು ಹುಡುಕಲು ಸಾಧ್ಯವಾಯಿತು ಎಂದು ನಮ್ಮ ತಂಡಕ್ಕೆ ಹೇಳಿದರು.

ಸ್ನೇಹಿತರೇ, ಭೂಕಂಪದ ನಂತರ, ಮ್ಯಾನ್ಮಾರ್ನ ಮಾಂಡಲೆಯ ಒಂದು ಬೌದ್ಧ ವಿಹಾರದಲ್ಲಿ ಅನೇಕ ಜನರು ಸಿಲುಕಿಕೊಂಡಿರುವ ಅನುಮಾನವಿತ್ತು. ನಮ್ಮ ಸ್ನೇಹಿತರು ಇಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಂಡರು, ಇದರಿಂದಾಗಿ ಅವರಿಗೆ ಬೌದ್ಧ ಸನ್ಯಾಸಿಗಳಿಂದ ಸಾಕಷ್ಟು ಆಶೀರ್ವಾದ ಲಭಿಸಿತು. ಆಪರೇಷನ್ ಬ್ರಹ್ಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ನಮಗೆ ನಮ್ಮದೇ ಆದ ಸಂಪ್ರದಾಯವಿದೆ, ನಮ್ಮದೇ ಆದ ಮೌಲ್ಯಗಳಿವೆ, ‘ವಸುಧೈವ ಕುಟುಂಬಕಂ’ ಅಂದರೆ ಇಡೀ ಜಗತ್ತೇ ಒಂದು ಕುಟುಂಬ ಎಂಬ ಭಾವನೆ ನಮ್ಮಲ್ಲಿದೆ. ಬಿಕ್ಕಟ್ಟಿನ ಸಮಯದಲ್ಲಿ ವಿಶ್ವ ಸ್ನೇಹಿತನಾಗಿ ಭಾರತದ ಸಿದ್ಧತೆ ಮತ್ತು ಮಾನವೀಯತೆಗೆ ಭಾರತದ ಬದ್ಧತೆ ನಮ್ಮ ಹೆಗ್ಗುರುತಾಗಿದೆ.

ಸ್ನೇಹಿತರೇ, ಆಫ್ರಿಕಾದ ಇಥಿಯೋಪಿಯಾದಲ್ಲಿ ಭಾರತೀಯ ವಲಸಿಗರ ಒಂದು ನವೀನ ಪ್ರಯತ್ನದ ಬಗ್ಗೆ ನನಗೆ ತಿಳಿದುಬಂದಿದೆ. ಇಥಿಯೋಪಿಯಾದಲ್ಲಿ ವಾಸಿಸುವ ಭಾರತೀಯರು ಜನ್ಮತಃ ಹೃದ್ರೋಗದಿಂದ ಬಳಲುತ್ತಿರುವ ಮಕ್ಕಳನ್ನು ಚಿಕಿತ್ಸೆಗಾಗಿ ಭಾರತಕ್ಕೆ ಕಳುಹಿಸಲು ಮುಂದಾಗಿದ್ದಾರೆ. ಅಂತಹ ಅನೇಕ ಮಕ್ಕಳಿಗೆ ಭಾರತೀಯ ಕುಟುಂಬಗಳು ಆರ್ಥಿಕ ಸಹಾಯವನ್ನು ನೀಡುತ್ತಿವೆ. ಒಂದು ವೇಳೆ ಮಗುವಿನ ಕುಟುಂಬವು ಹಣದ ಕೊರತೆಯಿಂದಾಗಿ ಭಾರತಕ್ಕೆ ಬರಲು ಸಾಧ್ಯವಾಗದಿದ್ದರೆ, ನಮ್ಮ ಭಾರತೀಯ ಸಹೋದರ ಸಹೋದರಿಯರು ಅದಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ. ಇಥಿಯೋಪಿಯಾದಲ್ಲಿ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಪ್ರತಿಯೊಂದು ನಿರ್ಗತಿಕ ಮಗುವಿಗೂ ಉತ್ತಮ ಚಿಕಿತ್ಸೆ ಸಿಗುವುದನ್ನು ಖಚಿತಪಡಿಸಿಕೊಳ್ಳುವುದು ಈ ಪ್ರಯತ್ನದ ಉದ್ದೇಶವಾಗಿದೆ. ಭಾರತೀಯ ವಲಸಿಗರ ಈ ಉದಾತ್ತ ಕಾರ್ಯವು ಇಥಿಯೋಪಿಯಾದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಭಾರತದಲ್ಲಿ ವೈದ್ಯಕೀಯ ಸೌಲಭ್ಯಗಳು ನಿರಂತರವಾಗಿ ಸುಧಾರಿಸುತ್ತಿವೆ ಎಂದು ನಿಮಗೆ ತಿಳಿದಿದೆ. ಇತರ ದೇಶಗಳ ನಾಗರಿಕರು ಸಹ ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.

ಸ್ನೇಹಿತರೇ, ಕೆಲವೇ ದಿನಗಳ ಹಿಂದೆ, ಭಾರತವು ಅಫ್ಘಾನಿಸ್ತಾನದ ಜನರಿಗಾಗಿ ದೊಡ್ಡ ಪ್ರಮಾಣದಲ್ಲಿ ಲಸಿಕೆಯನ್ನು ಕಳುಹಿಸಿದೆ. Rabies, Tetanus, Hepatitis B 2 Influenza ತಡೆಗಟ್ಟುವಲ್ಲಿ ಉಪಯುಕ್ತವಾಗಿರುತ್ತದೆ. ಈ ವಾರ, ನೇಪಾಳದ ಕೋರಿಕೆಯ ಮೇರೆಗೆ, ಭಾರತವು ನೇಪಾಳಕ್ಕೆ ದೊಡ್ಡ ಪ್ರಮಾಣದಲ್ಲಿ ಔಷಧಗಳು ಮತ್ತು ಲಸಿಕೆಗಳನ್ನು ಸಾರಬರಾಜು ಮಾಡಿದೆ. ಇದು ಫಲಸ್ಸೆಮಿಯಾ ಮತ್ತು sickle cell ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ಖಾತರಿಪಡಿಸಲಿದೆ. ಮಾನವ ಸೇವೆಯ ಪ್ರಸಂಗ ಬಂದಾಗಲೆಲ್ಲಾ, ಭಾರತ ಎಂದಿಗೂ ಮುಂಚೂಣಿಯಲ್ಲಿರುತ್ತದೆ ಮತ್ತು ಭವಿಷ್ಯದಲ್ಲಿಯೂ ಅಂತಹ ಪ್ರತಿಯೊಂದು ಅಗತ್ಯದಲ್ಲೂ ಮುಂಚೂಣಿಯಲ್ಲಿರಲಿದೆ.

ಈಗ ನಾವು ವಿಪತ್ತು ನಿರ್ವಹಣೆ ಬಗ್ಗೆ ಮಾತನಾಡುತ್ತಿದ್ದೆವು. ಯಾವುದೇ ನೈಸರ್ಗಿಕ ವಿಪತ್ತುಗಳನ್ನು ಎದುರಿಸಲು ನಿಮಗೆ ಮುಖ್ಯವಾಗಿ ಅಗತ್ಯವಿರುವುದು – ನಿಮ್ಮ ಜಾಗರೂಕತೆ. ಈ ಜಾಗರೂಕತೆಯಲ್ಲಿ ನಿಮ್ಮ ಮೊಬೈಲ್ ನಲ್ಲಿರುವ ಒಂದು ವಿಶೇಷ APP ನಿಂದ ನಿಮಗೆ ಸಹಾಯ ದೊರೆಯಬಹುದು. ಈ APP ನಿಮಗೆ ಯಾವುದೇ ನೈಸರ್ಗಿಕ ವಿಕೋಪದಲ್ಲಿ ಸಿಲುಕಿಬೀಳದಂತೆ ರಕ್ಷಿಸಬಹುದಾಗಿದ್ದು, ಇದರ ಹೆಸರು ಕೂಡಾ ‘ಸಚೇತ್’ ಎಂಬುದಾಗಿದೆ.

ಪ್ರವಾಹ, ಚಂಡಮಾರುತ, ಭೂಕುಸಿತ, ಸುನಾಮಿ, ಕಾಡ್ಲಿಚ್ಚು, ಹಿಮ-ಪಾತ, ಚಂಡಮಾರುತ, ಬಿರುಗಾಳಿ ಅಥವಾ ಸಿಡಿಲು ಬೀಳುವಂತಹ ಆಪತ್ತುಗಳ ಸಂದರ್ಭದಲ್ಲಿ ‘ಸಚೇತ್ APP’ ನಿಮಗೆ ಎಲ್ಲಾ ವಿಧದಲ್ಲೂ ಮಾಹಿತಿ ತಲುಪಿಸುವ ಮತ್ತು ನಿಮ್ಮನ್ನು ಸುರಕ್ಷಿತವಾಗಿ ಇರಿಸುವ ಪ್ರಯತ್ನ ಮಾಡುತ್ತದೆ. ವಿಶೇಷವೆಂದರೆ ‘ಸಚೇತ್ APP’ ಪ್ರಾದೇಶಿಕ ಭಾಷೆಗಳಲ್ಲಿಯೂ ಸಹ ಸಾಕಷ್ಟು ಮಾಹಿತಿಯನ್ನು ಒದಗಿಸುತ್ತದೆ. ನೀವು ಈ ಅನ್ವಯಿಕದ ಲಾಭ ಪಡೆದುಕೊಳ್ಳಿ ಮತ್ತು ನಿಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಇಡೀ ಪ್ರಪಂಚವೇ ಭಾರತದ ಪ್ರತಿಭೆಯನ್ನು ಪ್ರಶಂಸಿಸುತ್ತಿರುವುದನ್ನು ನೋಡುತ್ತಿದ್ದೇವೆ. ಭಾರತದ ಯುವಜನತೆ ಭಾರತದ ಬಗ್ಗೆ ವಿಶ್ವದ ದೃಷ್ಟಿಕೋನವನ್ನು ಬದಲಾಯಿಸಿದ್ದಾರೆ ಮತ್ತು ಯಾವುದೇ ದೇಶದ ಯುವಜನತೆಯ ಆಸಕ್ತಿ ಎನ್ನುವುದು ಆ ದೇಶದ ಭವಿಷ್ಯ ಹೇಗಿರುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಇಂದು ಭಾರತದ ಯುವಜನತೆ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರದ ಹಾದಿಯಲ್ಲಿ ಮುಂದೆ ಸಾಗುತ್ತಿದ್ದಾರೆ. ಈ ಮೊದಲು ಹಿಂದುಳಿದಿರುವಿಕೆ ಮತ್ತು ಇತರೆ ಕಾರಣಗಳಿಗಾಗಿ ಹೆಸರಾಗಿದ್ದ ಪ್ರದೇಶಗಳಲ್ಲಿ ಕೂಡಾ ಯುವಜನತೆ ನಮಗೆ ಹೊಸ ಆತ್ಮ ವಿಶ್ವಾಸ ತುಂಬುವ ಉದಾಹರಣೆಗಳನ್ನು ಪ್ರಸ್ತುತಪಡಿಸಿದ್ದಾರೆ. ಛತ್ತೀಸ್ ಗಢದ ದಂತೇವಾಡಾದ ವಿಜ್ಞಾನ ಕೇಂದ್ರವು ಇತ್ತೀಚಿನ ದಿನಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಕೆಲ ಕಾಲದ ಹಿಂದೆ, ದಂತೇವಾಡಾದ ಹೆಸರು ಕೇವಲ ಹಿಂಸಾಚಾರ ಮತ್ತು ಅಶಾಂತಿಯ ಪರಿಸ್ಥಿತಿಗಾಗಿ ಕೇಳಿಬರುತ್ತಿತ್ತು, ಆದರೆ ಈಗ ಅಲ್ಲಿ, ಒಂದು ವಿಜ್ಞಾನ ಕೇಂದ್ರ, ಮಕ್ಕಳು ಮತ್ತು ಅವರ ತಾಯ್ತಂದೆಯರಿಗೆ ಭರವಸೆಯ ಹೊಸ ಕಿರಣವಾಗಿ ಮೂಡಿ ಬಂದಿದೆ. ಈ ವಿಜ್ಞಾನ ಕೇಂದ್ರಕ್ಕೆ ಹೋಗುವುದೆಂದರೆ ಮಕ್ಕಳಿಗೆ ಬಹಳ ಇಷ್ಟವಾಗುತ್ತಿದೆ. ಈಗ ಅವರು ಹೊಸ-ಹೊಸ ಯಂತ್ರಗಳನ್ನು ತಯಾರಿಸುವುದರಿಂದ ಹಿಡಿದು, ತಂತ್ರಜ್ಞಾನವನ್ನು ಉಪಯೋಗಿಸಿ, ಹೊಸ ಉತ್ಪನ್ನಗಳನ್ನು ತಯಾರಿಸಲು ಕೂಡಾ ಕಲಿಯುತ್ತಿದ್ದಾರೆ. ಅವರಿಗೆ 3D printers ಮತ್ತು robotic ಕಾರುಗಳೊಂದಿಗೆ ಇತರೆ ಆವಿಷ್ಕಾರಕ ವಸ್ತುಗಳ ಬಗ್ಗೆ ಅರಿಯುವ ಅವಕಾಶ ಕೂಡಾ ದೊರೆಯುತ್ತಿದೆ. ಈಗ ಕೆಲವೇ ದಿನಗಳ ಹಿಂದೆ ನಾನು ಗುಜರಾತ್ ನ ಸೈನ್ಸ್ ಸಿಟಿಯಲ್ಲಿ ಕೂಡಾ ಸೈನ್ಸ್ ಗ್ಯಾಲರಿಗಳನ್ನು ಉದ್ಘಾಟಿಸಿದೆ. ಆಧುನಿಕ ವಿಜ್ಞಾನದ ಸಾಮರ್ಥ್ಯವೇನು, ವಿಜ್ಞಾನ ನಮಗೆ ಏನೆಲ್ಲಾ ಮಾಡಲು ಸಾಧ್ಯ ಎಂಬುದರ ಕುರಿತ ಒಂದು ನೋಟವನ್ನು ಈ ಗ್ಯಾಲರಿಗಳು ನಮಗೆ ನೀಡುತ್ತವೆ. ಈ ಗ್ಯಾಲರಿಗಳೆಂದರೆ ಮಕ್ಕಳಿಗೆ ಬಹಳ ಉತ್ಸಾಹ ಎಂಬ ಮಾಹಿತಿ ನನಗೆ ದೊರೆತಿದೆ. ವಿಜ್ಞಾನ ಮತ್ತು ಆವಿಷ್ಕಾರದ ಬಗ್ಗೆ ಹೆಚ್ಚಾಗುತ್ತಿರುವ ಈ ಆಕರ್ಷಣೆ, ಖಂಡಿತವಾಗಿಯೂ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ದೇಶದ ಅತಿ ದೊಡ್ಡ ಬಲವೆಂದರೆ ಅದು ನಮ್ಮ 140 ಕೋಟಿ ನಾಗರಿಕರು, ಅವರ ಸಾಮರ್ಥ್ಯ, ಅವರ ಇಚ್ಛಾ ಶಕ್ತಿ. ಕೋಟ್ಯಾಂತರ ಜನರು ಯಾವುದಾದರೊಂದು ಅಭಿಯಾನದಲ್ಲಿ ಒಟ್ಟಾಗಿ ಸೇರಿದಾಗ, ಅದರ ಪರಿಣಾಮ ಕೂಡಾ ಬಹಳ ದೊಡ್ಡದಾಗಿರುತ್ತದೆ. ಇದರ ಒಂದು ಉದಾಹರಣೆಯೆಂದರೆ ‘ತಾಯಿಯ ಹೆಸರಿನಲ್ಲಿ ಒಂದು ಸಸಿ’ -ಈ ಅಭಿಯಾನ ನಮಗೆ ಜನ್ಮ ನೀಡಿದ ತಾಯಿಯ ಹೆಸರಿನಲ್ಲಿ ಹಾಗೆಯೇ ನಮ್ಮನ್ನು ತನ್ನ ಮಡಿಲಿನಲ್ಲಿ ಇರಿಸಿಕೊಂಡಿರುವ ನಮ್ಮ ಭೂಮಿ ತಾಯಿಗಾಗಿ, ಸ್ನೇಹಿತರೇ, ಜೂನ್ ತಿಂಗಳ 5 ರಂದು ‘ವಿಶ್ವ ಪರಿಸರ ದಿನ’ ಈ ವರ್ಷ ಈ ದಿನದಂದು ನಮ್ಮ ಅಭಿಯಾನಕ್ಕೆ ಒಂದು ವರ್ಷ ಪೂರ್ಣವಾಗಲಿದೆ. ಈ ಒಂದು ವರ್ಷದಲ್ಲಿ ಈ ಅಭಿಯಾನದ ಅಡಿಯಲ್ಲಿ ದೇಶಾದ್ಯಂತ ತಾಯಿಯ ಹೆಸರಿನಲ್ಲಿ 140 ಕೋಟಿಗಿಂತಲೂ ಅಧಿಕ ಸಸಿಗಳನ್ನು ನೆಡಲಾಗಿದೆ. ಭಾರತದ ಈ ಉಪಕ್ರಮವನ್ನು ನೋಡಿ, ವಿದೇಶಗಳಲ್ಲಿ ಕೂಡಾ ಜನರು ತಮ್ಮ ತಾಯಂದಿರ ಹೆಸರಿನಲ್ಲಿ ಗಿಡಗಳನ್ನು ನೆಟ್ಟಿದ್ದಾರೆ. ನೀವು ಕೂಡ ಈ ಅಭಿಯಾನದ ಭಾಗವಾಗಬೇಕು, ಇದರಿಂದ ಒಂದು ವರ್ಷ ಪೂರ್ಣಗೊಂಡಾಗ, ನಿಮ್ಮ ಭಾಗವಹಿಸುವಿಕೆಯ ಬಗ್ಗೆ ನೀವು ಹೆಮ್ಮೆಪಡಬಹುದು.

ಸ್ನೇಹಿತರೇ, ಮರಗಳಿಂದ ತಂಪು ದೊರೆಯುತ್ತದೆ, ಮರಗಳ ನೆರಳಿನಲ್ಲಿ ಬಿಸಿಲಿನಿಂದ ಉಪಶಮನ ದೊರೆಯುತ್ತದೆ ಎಂಬುದು ನಮಗೆಲ್ಲಾ ತಿಳಿದೇ ಇದೆ. ಆದರೆ ಇತ್ತೀಚೆಗೆ ಇದಕ್ಕೆ ಸಂಬಂಧಿಸಿದ ಇನ್ನೊಂದು ಸುದ್ದಿಯನ್ನು ನಾನು ನೋಡಿದೆ, ಅದು ನನ್ನ ಗಮನ ಸೆಳೆಯಿತು. ಕಳೆದ ಕೆಲವು ವರ್ಷಗಳಲ್ಲಿ ಗುಜರಾತ್ ನ ಅಹಮದಾಬಾದ್ ನಗರದಲ್ಲಿ 70 ಲಕ್ಷಕ್ಕೂ ಅಧಿಕ ಮರಗಳನ್ನು ನೆಡಲಾಗಿದೆ. ಈ ಮರಗಳು ಅಹಮದಾಬಾದ್ ನಲ್ಲಿ ಹಸಿರು ಪ್ರದೇಶವನ್ನು ಗಣನೀಯವಾಗಿ ಹೆಚ್ಚಿಸಿವೆ. ಇದರೊಂದಿಗೆ, ಸಬರಮತಿ ನದಿಗೆ ಅಡ್ಡಲಾಗಿ ದಂಡೆಯ ನಿರ್ಮಾಣ ಮತ್ತು ಕಂಕರಿಯಾ ಸರೋವರದಂತಹ ಕೆಲವು ಸರೋವರಗಳ ಪುನರ್ನಿಮರ್ಾಣದಿಂದಾಗಿ ಇಲ್ಲಿ ಜಲಮೂಲಗಳ ಸಂಖ್ಯೆಯೂ ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಅಹಮದಾಬಾದ್ ನಗರ ಜಾಗತಿಕ ತಾಪಮಾನ ಏರಿಕೆಯ ವಿರುದ್ದ ಹೋರಾಡುವ ಪ್ರಮುಖ ನಗರಗಳಲ್ಲಿ ಒಂದಾಗಿದೆ ಎಂಬುದನ್ನು ಸುದ್ದಿ ವರದಿಗಳು ಹೇಳುತ್ತವೆ. ಅಲ್ಲಿನ ಜನರು ಕೂಡ ಈ ಬದಲಾವಣೆಯನ್ನು, ವಾತಾವರಣದಲ್ಲಿನ ಈ ತಂಪನ್ನು ಅನುಭವಿಸುತ್ತಿದ್ದಾರೆ. ಅಹಮದಾಬಾದ್ ನಲ್ಲಿ ನೆಡಲಾದ ಮರಗಳು ಅಲ್ಲಿ ಹೊಸ ಸಮೃದ್ಧಿಗೆ ಕಾರಣವಾಗುತ್ತಿವೆ. ಭೂಮಿತಾಯಿಯ ಆರೋಗ್ಯವನ್ನು

ಸರಿಯಾಗಿ ಇರಿಸಬೇಕೆಂದರೆ, ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಮತ್ತು ನಿಮ್ಮ ಮಕ್ಕಳ ಭವಿಷ್ಯವನ್ನು ಸುರಕ್ಷಿತವಾಗಿಸಲು, ‘ತಾಯಿಯ ಹೆಸರಿನಲ್ಲಿ ಒಂದು ಸಸಿ’ ಖಂಡಿತವಾಗಿಯೂ ನೆಡಿ ಎಂದು ನಾನು ನಿಮ್ಮಲ್ಲಿ ಮತ್ತೊಮ್ಮೆ ಮನವಿ ಮಾಡುತ್ತೇನೆ.

ಸ್ನೇಹಿತರೇ, ‘ಮನಸ್ಸಿದ್ದರೆ ಮಾರ್ಗ’ ಎಂಬ ಒಂದು ಹಳೆಯ ಗಾದೆ ಮಾತೊಂದಿದೆ. ನಾವು ಹೊಸದೇನಾದರೂ ಮಾಡಬೇಕೆಂದು ನಿರ್ಧಾರ ಮಾಡಿದರೆ, ಅದರ ಗುರಿ ಖಂಡಿತವಾಗಿಯೂ ತಲುಪಿಯೇ ತೀರುತ್ತೇವೆ. ಬೆಟ್ಟಗುಡ್ಡಗಳಲ್ಲಿ ಬೆಳೆಯುವ ಸೇಬು ಹಣ್ಣನ್ನು ನೀವೆಲ್ಲರೂ ಸಾಕಷ್ಟು ತಿಂದೇ ಇರುತ್ತೀರಿ. ಆದರೆ, ನೀವು ಕರ್ನಾಟಕದ ಸೇಬಿನ ರುಚಿ ಆಸ್ವಾದಿಸಿದ್ದೀರಾ ಎಂದು ಕೇಳಿದರೆ? ನೀವು ಆಶ್ಚರ್ಯಚಕಿತರಾಗುತ್ತೀರಿ. ಸಾಧಾರಣವಾಗಿ ಸೇಬಿನ ಕೃಷಿಯನ್ನು ಬೆಟ್ಟ ಗುಡ್ಡಗಳ ಮೇಲೆ ಮಾಡಲಾಗುತ್ತದೆ ಎಂದು ನಾವು ತಿಳಿದಿದ್ದೇವೆ. ಆದರೆ ಕರ್ನಾಟಕದ ಬಾಗಲಕೋಟೆಯ ನಿವಾಸಿ ಶ್ರೀ ಶೈಲ್ ತೆಲೀ ಅವರು ಬಯಲು ಪ್ರದೇಶದಲ್ಲಿ ಸೇಬು ಬೆಳೆದಿದ್ದಾರೆ. ಅವರ ಕುಲಾಲೀ ಗ್ರಾಮದಲ್ಲಿ 35 ಡಿಗ್ರಿಗಿಂತ ಅಧಿಕ ತಾಪಮಾನವಿರುತ್ತದೆ ಆದರೂ ಸೇಬಿನ ಮರಗಳು ಫಲ ನೀಡಲಾರಂಭಿಸಿವೆ. ವಾಸ್ತವದಲ್ಲಿ ಶ್ರೀ ಶೈಲ್ ತೇಲಿ ಅವರಿಗೆ ಕೃಷಿಯ ಬಗ್ಗೆ ಒಲವು ಇತ್ತು. ಆದ್ದರಿಂದ ಅವರು ಸೇಬು ಕೃಷಿಯನ್ನೂ ಪ್ರಯತ್ನಿಸಿದರು ಮತ್ತು ಅದರಲ್ಲಿ ಯಶಸ್ಸನ್ನೂ ಕಂಡರು. ಇಂದು ಅವರು ನೆಟ್ಟ ಸೇಬು ಮರಗಳಲ್ಲಿ ಹೆಚ್ಚಿನ ಸಂಖ್ಯೆಯ ಸೇಬುಗಳು ಬೆಳೆಯುತ್ತಿವೆ ಮತ್ತು ಅವುಗಳನ್ನು ಮಾರಾಟ ಮಾಡುವ ಮೂಲಕ ಅವರು ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ.
ಸ್ನೇಹಿತರೇ, ಸೇಬಿನ ವಿಷಯ ಮಾತನಾಡುತ್ತಿರುವಾಗ, ನಮ್ಮ ಕಿನ್ನರಿ ಸೇಬಿನ ಹೆಸರನ್ನು ನೀವು ಖಂಡಿತವಾಗಿಯೇ ಕೇಳಿಯೇ ಇರುತ್ತೀರಿ. ಸೇಬುಗಳಿಗೆ ಹೆಸರಾಗಿರುವ ಕಿರ್ ನಲ್ಲಿ ಕೇಸರಿಯ ಉತ್ಪಾದನೆ ಆರಂಭವಾಗಿದೆ. ಸಾಧಾರಣವಾಗಿ ಹಿಮಾಚಲ ಪ್ರದೇಶದಲ್ಲಿ ಕೇಸರಿಯ ಕೃಷಿ ಕಡಿಮೆಯೇ ಇರುತ್ತದೆ, ಆದರೆ ಈಗ ಕಿನೌರ್ ನ ಅತಿಸುಂದರ ಸಂಗಲಾ ಕಣಿವೆಯಲ್ಲಿ ಕೂಡಾ ಕೇಸರಿಯ ಕೃಷಿ ಆರಂಭವಾಗಿದೆ. ಇಂತಹದ್ದೇ ಒಂದು ಉದಾಹರಣೆ ಕೇರಳದ ವೈನಾಡ್ ನಲ್ಲಿ ಕಂಡುಬಂದಿದೆ. ಇಲ್ಲಿ ಕೂಡಾ ಕೇಸರಿ ಕೃಷಿಯಲ್ಲಿ ಯಶಸ್ಸು ದೊರೆತಿದೆ. ವೈನಾಡಿನಲ್ಲಿ ಈ ಕೇಸರಿ ಕೃಷಿಯು ಯಾವುದೇ ಹೊಲ ಅಥವಾ ಮಣ್ಣಿನಲ್ಲಿ ಅಲ್ಲದೇ Aeroponics ತಂತ್ರ ಉಪಯೋಗಿಸಿ ಬೆಳೆಯಲಾಗುತ್ತಿದೆ. ಇಂತಹದ್ದೇ ಅಚ್ಚರಿಯ ಸಂಗತಿ ಲಿಚಿ ಇಳುವರಿಯಲ್ಲಿ ಕೂಡಾ ನಡೆದಿದೆ. ಬಿಹಾರ, ಪಶ್ಚಿಮ ಬಂಗಾಳ ಅಥವಾ ಜಾರ್ಖಂಡ್ ನಲ್ಲಿ ಲಿಚಿ ಬೆಳೆಯುತ್ತಾರೆಂದು ನಾವು ಕೇಳಿದ್ದೇವೆ. ಆದರೆ ಈಗ ದಕ್ಷಿಣ ಭಾರತ ಹಾಗೂ ರಾಜಸ್ತಾನದಲ್ಲಿ ಕೂಡಾ ಲಿಚಿ ಬೆಳೆ ಬೆಳೆಯಲಾಗುತ್ತಿದೆ. ತಮಿಳುನಾಡಿನ ಥಿರು ವೀರಾ ಅರಸು ಅವರು ಕಾಫಿ ಕೃಷಿ ಮಾಡುತ್ತಾರೆ. ಕೊಡೈಕೆನಾಲ್ ನಲ್ಲಿ ಅವರು ಲಿಚಿ ಸಸಿಗಳನ್ನು ನೆಟ್ಟರು ಮತ್ತು ಅವರ 7 ವರ್ಷಗಳ ಪರಿಶ್ರಮದ ನಂತರ ಈಗ ಆ ಮರಗಳಲ್ಲಿ ಹಣ್ಣು ಬರಲಾರಂಭಿಸಿದೆ. ಲಿಚಿ ಕೃಷಿಯಲ್ಲಿ ದೊರೆತ ಯಶಸ್ಸು ಸುತ್ತಮುತ್ತಲಿನ ಇತರ ರೈತರಿಗೆ ಕೂಡಾ ಪ್ರೇರೇಪಣೆ ನೀಡಿತು. ರಾಜಾಸ್ತಾನದಲ್ಲಿ ಜಿತೇಂದ್ರ ಸಿಂಗ್ ರಾಣವತ್ ಅವರಿಗೆ ಲಿಚಿ ಕೃಷಿಯಲ್ಲಿ ಯಶಸ್ಸು ದೊರೆತಿದೆ. ಈ ಎಲ್ಲಾ ಉದಾಹರಣೆಗಳು ಬಹಳ ಬಹಳ ಪ್ರೇರಣಾದಾಯಕವಾಗಿವೆ. ನಾವು ಏನಾದರೂ ಹೊಸದನ್ನು ಮಾಡಬೇಕೆಂದು ಸಂಕಲ್ಪ ಮಾಡಿದರೇ, ಕಷ್ಟಗಳ ಹೊರತಾಗಿಯೂ ಎದೆಗುಂದದೇ ಇದ್ದರೆ, ಖಂಡಿತವಾಗಿಯೂ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಏಪ್ರಿಲ್ ತಿಂಗಳ ಕೊನೆಯ ಭಾನುವಾರವಾಗಿದೆ. ಕೆಲವೇ ದಿನಗಳಲ್ಲಿ ಮೇ ತಿಂಗಳು ಆರಂಭವಾಗಲಿದೆ. ನಾನು ನಿಮ್ಮನ್ನು ಇಂದು ಸುಮಾರು 108 ವರ್ಷಗಳಷ್ಟು ಹಿಂದಿನ ವರ್ಷಕ್ಕೆ ಕರೆದೊಯ್ಯುತ್ತೇನೆ. 1917ಸ ಏಪ್ರಿಲ್ ಮತ್ತು ಮೇ ಇದೇ ಎರಡು ತಿಂಗಳು – ದೇಶದಲ್ಲಿ ಸ್ವಾತಂತ್ರ್ಯದ ವಿಶಿಷ್ಠ ಯುದ್ಧ ಮಾಡಲಾಗುತ್ತಿತ್ತು. ಬ್ರಿಟಿಷರ ಅತ್ಯಾಚಾರ ಮುಗಿಲು ಮುಟ್ಟಿತ್ತು. ಬಡವರು, ವಂಚಿತರು, ಮತ್ತು ರೈತರ ಮೇಲಿನ ಶೋಷಣೆಯು ಅಮಾನವೀಯ ಹಂತವನ್ನು ಕೂಡಾ ಮೀರಿತ್ತು. ಬಿಹಾರದ ಫಲವತ್ತಾದ ಭೂಮಿಯಲ್ಲಿ ಇಂಡಿಗೋ ಬೆಳೆಯುವಂತೆ ಈ ಬ್ರಿಟಿಷರು ರೈತರನ್ನು ಒತ್ತಾಯಿಸುತ್ತಿದ್ದರು. ಇಂಡಿಗೋ ಬೆಳೆಯ ಕೃಷಿಯಿಂದಾಗಿ ರೈತರ ಹೊಲಗದ್ದೆಗಳು ಬಂಜರು ಭೂಮಿಗಳಾಗುತ್ತಿದ್ದವು. ಆದರೆ ಬ್ರಿಟಿಷ್ ಸರ್ಕಾರಕ್ಕೆ ಈ ಕುರಿತು ಯಾವುದೇ ಕಾಳಜಿ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, 1917 ರಲ್ಲಿ ಗಾಂಧೀಜಿಯವರು ಬಿಹಾರದ ಚಂಪಾರಣ್ ಗೆ ತಲುಪಿದರು. ನಮ್ಮ ಭೂಮಿ ಸಾಯುತ್ತಿದೆ, ತಿನ್ನಲು ಆಹಾರ ಧಾನ್ಯ ದೊರೆಯುತ್ತಿಲ್ಲವೆಂದು ರೈತರು ಗಾಂಧೀಜಿಯವರಿಗೆ ಹೇಳಿದರು. ಲಕ್ಷಾಂತರ ರೈತರ ಈ ನೋವು ಅರಿತ ಗಾಂಧೀಜಿಯವರ ಮನಸ್ಸಿನಲ್ಲಿ ಒಂದು ಸಂಕಲ್ಪ ಮೂಡಿತು. ಅಲ್ಲಿಂದಲೇ ಚಂಪಾರಣ್ ನ ಐತಿಹಾಸಿಕ ಸತ್ಯಾಗ್ರಹ ಆರಂಭವಾಯಿತು. ‘ಚಂಪಾರಣ್ ಸತ್ಯಾಗ್ರಹ’ ಇದು ಬಾಪೂ ಅವರಿಂದ ಭಾರತದಲ್ಲಿ ಆರಂಭವಾದ ಪ್ರಥಮ ದೊಡ್ಡ ಪ್ರಮಾಣದ ಪ್ರಯೋಗವಾಗಿತ್ತು. ಬಾಪೂ ಅವರ ಸತ್ಯಾಗ್ರಹದಿಂದ ಇಡೀ ಬ್ರಿಟಿಷ್ ಸರ್ಕಾರ ನಡುಗಿ ಬಿಟ್ಟಿತು. ಇಂಡಿಗೋ ಕೃಷಿ ಮಾಡಬೇಕೆಂದು ರೈತರನ್ನು ಒತ್ತಾಯಿಸುವ ಕಾನೂನನ್ನು ಸ್ಥಗಿತಗೊಳಿಸಬೇಕಾಗಿ ಬಂದಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೊಸ ವಿಶ್ವಾಸ ತುಂಬಿದಂತಹ ಒಂದು ಗೆಲುವುದು ಇದಾಗಿತ್ತು. ಇದರಲ್ಲಿ ಸ್ವಾತಂತ್ರ್ಯಾನಂತರ ದೇಶದ ಪ್ರಥಮ ರಾಷ್ಟ್ರಪತಿ ಹುದ್ದೆಗೇರಿದ ಬಿಹಾರದ ಮತ್ತೊರ್ವ ಸುಪುತ್ರನ ಕೊಡುಗೆ ಕೂಡಾ ಈ ಸತ್ಯಾಗ್ರಹಕ್ಕೆ ದೊರೆತಿತ್ತು ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ. ಆ ಮಹಾನ್ ವ್ಯಕ್ತಿಯೇ – ಡಾ. ರಾಜೇಂದ್ರ ಪ್ರಸಾದ್. ಅವರು ‘ಚಂಪಾರಣ್ ಸತ್ಯಾಗ್ರಹ’ ಕುರಿತಂತೆ Satyagraha in Champaran’ ಎಂಬ ಪುಸ್ತಕವನ್ನು ಕೂಡಾ ಬರೆದಿದ್ದಾರೆ, ದೇಶದ ಯುನಜನತೆ ಓದಲೇ ಬೇಕಾದ ಪುಸ್ತಕ ಇದಾಗಿದೆ. ಸೋದರ-ಸೋದರಿಯರೇ, ಏಪ್ರಿಲ್ ತಿಂಗಳಿನಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದ ಇನ್ನೂ ಅನೇಕ ಅದ್ಭುತ ಅಧ್ಯಾಯಗಳು ಬೆಸೆದುಕೊಂಡಿವೆ. ಏಪ್ರಿಲ್ ತಿಂಗಳ 6 ರಂದು ಗಾಂದೀಜಿಯವರ ದಂಡಿ ಯಾತ್ರೆ ಪೂರ್ಣಗೊಂಡಿತು. ಮಾರ್ಚ್ 12 ರಂದು ಆರಂಭವಾಗಿ 24 ದಿನಗಳ ಕಾಲ ಮುಂದುವರಿದ ಈ ಯಾತ್ರೆಯು ಬ್ರಿಟಿಷರನ್ನು ಬೆಚ್ಚಿ ಬೀಳಿಸಿತು. ಏಪ್ರಿಲ್ ತಿಂಗಳಿನಲ್ಲಿಯೇ ಜಲಿಯನ್ ವಾಲಾಬಾಗ್ ನರಮೇಧ- ಹತ್ಯಾಕಾಂಡವೂ ನಡೆಯಿತು. ಪಂಜಾಬ್ ನೆಲದಲ್ಲಿ ಈ ರಕ್ತಸಿಕ್ತ ಇತಿಹಾಸದ ಗುರುತು ಇಂದಿಗೂ ಹಾಗೆಯೇ ಉಳಿದಿದೆ.

ಸ್ನೇಹಿತರೇ ಕೆಲವೇ ದಿನಗಳಲ್ಲಿ ಮೇ 10ರಂದು, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಾರ್ಷಿಕೋತ್ಸವ ಕೂಡಾ ಬರಲಿದೆ. ಸ್ವಾತಂತ್ರ್ಯದ ಆ ಮೊದಲ ಯುದ್ಧದಲ್ಲಿ ಹೊತ್ತಿಕೊಂಡ ಕಿಡಿಯು, ಮುಂದೆ ಲಕ್ಷಾಂತರ ಸೈನಿಕರಿಗೆ ಜ್ಯೋತಿಯಾಯಿತು. ಇದೀಗ ಏಪ್ರಿಲ್ 26ರಂದು ನಾವು 1857 ರ ಕ್ರಾಂತಿಯ ಮಹಾನ್ ನಾಯಕ ಬಾಬೂ ವೀರ್ ಕುವರ್ ಸಿಂಹ ಅವರ ಪುಣ್ಯ ತಿಥಿಯನ್ನು ಕೂಡಾ ಆಚರಿಸಿದ್ದೇವೆ. ಬಿಹಾರದ ಮಹಾನ್ ಯೋಧನಿಂದ ಇಡೀ ದೇಶಕ್ಕೆ ಸ್ಫೂರ್ತಿ ದೊರೆಯುತ್ತದೆ. ಇಂತಹ ಲಕ್ಷಾಂತರ ಸ್ವಾತಂತ್ರ್ಯಯೋಧರ ಅಮರ ಪ್ರೇರೇಪಣೆಯನ್ನು ನಾವು ಜೀವಂತವಾಗಿ ಇರಿಸಬೇಕು. ನಮಗೆ ಅದರಿಂದ ದೊರೆಯುವ ಶಕ್ತಿಯು ಅಮೃತಕಾಲದ ನಮ್ಮ ಸಂಕಲ್ಪಗಳಿಗೆ ಹೊಸ ಶಕ್ತಿ, ಬಲ ತುಂಬುತ್ತದೆ.

ಸ್ನೇಹಿತರೆ, ‘ಮನದ ಮಾತಿನ’ ಈ ದೀರ್ಘ ಪ್ರಯಾಣದಲ್ಲಿ ನೀವು ಈ ಕಾರ್ಯಕ್ರಮದೊಂದಿಗೆ ಒಂದು ಆತ್ಮೀಯ ಬಾಂಧವ್ಯ ಬೆಸೆದುಕೊಂಡಿದ್ದೀರಿ. ದೇಶವಾಸಿಗಳು ಇತರರೊಂದಿಗೆ ಹಂಚಿಕೊಳ್ಳುವ ಸಾಧನೆಗಳನ್ನು ಮನದ ಮಾತಿನ ಮೂಲಕ ಜನರಿಗೆ ತಲುಪಿಸುತ್ತಾರೆ. ಮುಂದಿನ ತಿಂಗಳು ನಾವು ಪುನಃ ಭೇಟಿಯಾಗೋಣ, ದೇಶದ ವೈವಿಧ್ಯತೆ, ಗೌರವಪೂರ್ಣ ಪರಂಪರೆ ಮತ್ತು ಹೊಸ ಸಾಧನೆಗಳ ಬಗ್ಗೆ ಮಾತನಾಡೋಣ. ಸಮರ್ಪಣೆ ಮತ್ತು ಸೇವಾ ಮನೋಭಾವನೆಯಿಂದ ಸಮಾಜದಲ್ಲಿ ಬದಲಾವಣೆ ತರುತ್ತಿರುವ ಇಂತಹ ಜನರ ಕುರಿತು ಹೀಗೆಯೇ ತಿಳಿದುಕೊಳ್ಳುತ್ತಿರೋಣ. ಎಂದಿನಂತೆಯೇ ನೀವೆಲ್ಲರೂ ನಿಮ್ಮ ಚಿಂತನೆಗಳು, ಸಲಹೆ ಸೂಚನೆಗಳನ್ನು ಕಳುಹಿಸುತ್ತಿರಿ. ಧನ್ಯವಾದ, ನಮಸ್ಕಾರ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read