ಮಂಗಳೂರು: ಕಾಲೇಜು ವಿದ್ಯಾರ್ಥಿನಿಗೆ ವಾಲಿಬಾಲ್ ತರಬೇತುದಾರ ಮೊಬೈಲ್ ಮೂಲಕ ಸಂದೇಶ ಕಳುಹಿಸಿ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದು, ಈ ಕುರಿತಾಗಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಕಾಲೇಜೊಂದರಲ್ಲಿ ಓದುತ್ತಿರುವ 17 ವರ್ಷದ ವಿದ್ಯಾರ್ಥಿನಿಗೆ ಕಾರ್ಕಳ ನಿವಾಸಿ ಸೈಯದ್(24) ಎಂಬಾತ ಕೆಲವು ದಿನಗಳಿಂದ ನಿರಂತರ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಹಿಂದೂ ಸಂಘಟನೆ ಕಾರ್ಯಕರ್ತರು ಏಪ್ರಿಲ್ 26ರಂದು ಉಜಿರೆಯಲ್ಲಿ ಆರೋಪಿ ಸೈಯದ್ ನನ್ನು ಪತ್ತೆ ಮಾಡಿ ಥಳಿಸಿದ್ದಾರೆ. ನಂತರ ಬೆಳ್ತಂಗಡಿ ಪೊಲೀಸರಿಗೆ ಆತನನ್ನು ಒಪ್ಪಿಸಲಾಗಿದೆ.
ಸೈಯದ್ ಮೊಬೈಲ್ ಪರಿಶೀಲಿಸಿದಾಗ ಯುವತಿಯರ ಮತ್ತು ಆತನ ಅಶ್ಲೀಲ ಫೋಟೋ, ವಿಡಿಯೋಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ. ವಿದ್ಯಾರ್ಥಿನಿಯಿಂದ ಮಾಹಿತಿ ಪಡೆದ ಬೆಳ್ತಂಗಡಿ ಠಾಣೆ ಪೊಲೀಸರು ಆರೋಪಿ ಸೈಯದ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, ಜಾಮೀನು ಮಂಜೂರು ಮಾಡಲಾಗಿದೆ.