ಚಿನ್ನಕ್ಕೇ ಪೈಪೋಟಿ ನೀಡುವಂತೆ ಅಡಕೆ ದರ ಕೂಡ ಏರಿಕೆಯಾಗತೊಡಗಿದೆ. ಮಾರುಕಟ್ಟೆಯಲ್ಲಿ ಚಿನ್ನದ ಮಾದರಿಯಲ್ಲಿ ಅಡಕೆ ದರ ನಿರಂತರವಾಗಿ ಏರುಗತಿಯಲ್ಲಿ ಸಾಗಿದೆ.
ಅತಿದೊಡ್ಡ ಅಡಕೆ ಮಾರುಕಟ್ಟೆ ಎಂದೇ ಹೇಳಲಾಗುವ ಶಿವಮೊಗ್ಗ ಎಪಿಎಂಸಿಯಲ್ಲಿ ಸರಕು ಅಡಿಕೆ ದರ ಕ್ವಿಂಟಾಲ್ ಗೆ ಒಂದು ಲಕ್ಷ ರೂ. ತಲುಪುವ ಆಶಾಭಾವನೆ ಮೂಡಿಸಿದೆ. ಏಪ್ರಿಲ್ 24ರಂದು ಸರಕು ಅಡಕೆ ಕ್ವಿಂಟಾಲ್ ಗೆ 96,340 ರೂ. ದರ ಸಿಕ್ಕಿದೆ.
ಅದೇ ರೀತಿ ಅತಿ ಹೆಚ್ಚು ಆವಕವಾಗುವ ಬೆಟ್ಟೆ, ರಾಶಿ, ಇಡಿ ಧಾರಣೆ ಕೂಡ 60 ಸಾವಿರ ರೂ. ಆಸುಪಾಸಿನಲ್ಲಿದೆ. ಚಾಲಿ ಅಡಕೆ ದರ 40 ರಿಂದ 45 ಸಾವಿರ ರೂ. ನಡುವೆ ಇದೆ. ದಶಕದ ಹಿಂದೆ ಸರಕು ಅಡಿಕೆ ದರ ಕ್ವಿಂಟಾಲ್ ಗೆ 95,000 ರೂ., ರಾಶಿ ಇಡಿ ಅಡಿಕೆ ದರ 80,000 ರೂ. ಗಡಿ ದಾಟಿತ್ತು. ಇದೀಗ ಸರಕು ಅಡಿಕೆಗೆ ಕ್ವಿಂಟಾಲ್ ಗೆ 96 ಸಾವಿರ ರೂ. ದರ ಬಂದಿದೆ.
ಏಪ್ರಿಲ್ 24ರಂದು ಶಿವಮೊಗ್ಗ ಎಪಿಎಂಸಿಯಲ್ಲಿ ಸರಕು ದರ ಕ್ವಿಂಟಾಲ್ ಗೆ ಕನಿಷ್ಠ 67,240 ರೂ., ಗರಿಷ್ಠ 96,340 ರೂ ಧಾರಣೆ ಸಿಕ್ಕಿದೆ.
ಬೆಟ್ಟೆ 53,669 -63,389 ರೂ., ರಾಶಿ 55,169 -60,699 ರೂ., ಇಡಿ 45,699-59,809 ರೂ., ಚಾಲಿ 38,899-44,098 ರೂ. ಧಾರಣೆ ಸಿಕ್ಕಿದೆ.
ಆದರೆ ಮಾರುಕಟ್ಟೆಯಲ್ಲಿ ಅಡಕೆಗೆ ಬಂಪರ್ ಬೆಲೆ ಬಂದಿದ್ದರೂ, ಬಹುತೇಕ ರೈತರ ಬಳಿ ಅಡಕೆ ದಾಸ್ತಾನು ಇಲ್ಲವಾಗಿದೆ. ಈ ವೇಳೆಗಾಗಲೇ ಹೆಚ್ಚಿನ ರೈತರು ಅಡಕೆ ಮಾರಾಟ ಮಾಡಿರುತ್ತಾರೆ. ದೊಡ್ಡ ರೈತರು, ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.